ಬೆಂಗಳೂರು: ಒಂದನೇ ತರಗತಿ ಪ್ರವೇಶಕ್ಕೆ ಇದ್ದ ಮಕ್ಕಳ ಗರಿಷ್ಠ ವಯೋಮಿತಿಯನ್ನು ಎಂಟು ವರ್ಷಕ್ಕೆ ಹೆಚ್ಚಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
2025 -26 ನೇ ಸಾಲಿನಿಂದ ಈ ನಿಯಮ ಅನ್ವಯವಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ಕನಿಷ್ಠ ವಯೋಮಿತಿಯನ್ನು ಆರು ವರ್ಷಗಳಿಗೆ ಕಡ್ಡಾಯಗೊಳಿಸಿದ ಕಾರಣ ಗರಿಷ್ಠ ವಯೋಮಿತಿಯಲ್ಲಿಯೂ ಹೆಚ್ಚಳ ಮಾಡಲಾಗಿದೆ.
ಎಲ್ಕೆಜಿ ಪ್ರವೇಶಕ್ಕೆ 4 ವರ್ಷ, ಯುಕೆಜಿಗೆ 5 ವರ್ಷ ಕನಿಷ್ಠ ವಯೋಮಿತಿ ಈಗಾಗಲೇ ನಿಗದಿ ಮಾಡಲಾಗಿದೆ. ಗರಿಷ್ಠ ವಯೋಮಿತಿಯನ್ನು ಕ್ರಮವಾಗಿ ಆರು ಹಾಗೂ ಏಳು ವರ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಕಡ್ಡಾಯ ಶಿಕ್ಷಣ ಕಾಯ್ದೆಗೆ ಅನುಗುಣವಾಗಿ ಮಕ್ಕಳ ದಾಖಲಾತಿಯ ಕನಿಷ್ಠ ಮತ್ತು ಗರಿಷ್ಠ ವಯೋಮಿತಿಯನ್ನು ಹೆಚ್ಚಳ ಮಾಡಿರುವುದರಿಂದ ಶಾಲೆ ತೊರೆಯುವ ಮಕ್ಕಳ ಸಂಖ್ಯೆ ಕಡಿಮೆ ಮಾಡಲು ಸಹಾಯಕವಾಗುತ್ತದೆ ಎಂದು ಹೇಳಲಾಗಿದೆ.