ಕಾಂಗ್ರೆಸ್ ಸಂಸದ ಆಧೀರ್ ಚೌಧರಿ, ‘ರಾಷ್ಟ್ರಪತಿ’ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಸಂಬೋಧಿಸಿದ್ದು, ಇದು ಬಿಜೆಪಿ ಸದಸ್ಯರನ್ನು ಕೆರಳಿಸಿದೆ. ಹೀಗಾಗಿ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಸಂಸದರು ಈ ಕುರಿತು ಬೇಷರತ್ ಕ್ಷಮೆ ಕೇಳಬೇಕೆಂದು ಆಗ್ರಹಿಸಲಾಗಿದೆ.
ಸಂಸತ್ತಿನ ಗೇಟ್ ಒಂದರ ಮುಂಭಾಗ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದು, ಇದೇ ವೇಳೆ ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಷ್ಟ್ರಪತಿಯವರನ್ನು ರಾಷ್ಟ್ರಪತ್ನಿ ಎಂದು ಹೇಳುವ ಮೂಲಕ ಆಧೀರ್ ಚೌಧರಿ ಭಾರತೀಯರನ್ನು ಅಪಮಾನಿಸಿದ್ದಾರೆ ಎಂದು ಆರೋಪಿಸಿದರು. ಇದು ಬಾಯಿ ತಪ್ಪಿನಿಂದ ಆದ ಪ್ರಮಾದವಲ್ಲ ಬದಲಾಗಿ ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಅವರು ಹೇಳಿದರು.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಆಧೀರ್ ಚೌಧರಿ, ಪ್ರಮಾದವಶಾತ್ ಆ ಶಬ್ದ ನನ್ನ ಬಾಯಿಯಿಂದ ಹೊರ ಬಂದಿದೆ. ಇದು ಬಾಯಿತಪ್ಪಿನಿಂದ ಆಗಿದ್ದು, ಬಿಜೆಪಿಯವರು ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಈ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.