
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಬಾಬಾಬುಡನ್ ಗಿರಿ ಯಾರಿಗೆ ಸೇರಿದ್ದು ಎಂಬ ವಿವಾದ ಬಹುಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಹಿಂದೂ ಹಾಗು ಮುಸ್ಲಿಮರು ಇದು ತಮಗೆ ಸೇರಿದ್ದು ಎಂಬ ವಾದವನ್ನು ಮಂಡಿಸುತ್ತಿದ್ದು, ವಿವಾದ ನ್ಯಾಯಾಲಯದಲ್ಲಿದೆ.
ಇದರ ಮಧ್ಯೆ ಪಠ್ಯಪುಸ್ತಕಗಳಲ್ಲಿ ಈ ಮೊದಲು ಇದನ್ನು ಬಾಬಾಬುಡನ್ ಗಿರಿ ಎಂದು ಹೆಸರಿಸಿದ್ದು, ಇದೀಗ ಬಾಬಾಬುಡನ್ ಗಿರಿ (ಇನಾಮ್ ದತ್ತಾತ್ರೇಯ ಪೀಠ) ಎಂದು ತಿದ್ದುಪಡಿ ಮಾಡಲಾಗಿದೆ. ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಅವರು ಕೇಳಿದ ಪ್ರಶ್ನೆಗೆ ಈ ಉತ್ತರ ನೀಡಲಾಗಿದೆ.
ನಾಲ್ಕು ಮತ್ತು ಒಂಬತ್ತನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಬಾಬಾಬುಡನ್ ಗಿರಿ ಎಂಬ ಪದವನ್ನು ಬಾಬಾ ಬುಡನ್ ಗಿರಿ (ಇನಾಮ್ ದತ್ತಾತ್ರೇಯ ಪೀಠ) ಎಂದು ತಿದ್ದುಪಡಿ ಮಾಡಲಾಗಿರುತ್ತದೆ ಎಂದು ತಿಳಿಸಲಾಗಿದ್ದು, ಇದರ ಜೊತೆಗೆ ಐತಿಹಾಸಿಕ ಸ್ಥಳಗಳ ಹೆಸರುಗಳು ಪಠ್ಯಪುಸ್ತಕಗಳಲ್ಲಿ ತಪ್ಪಾಗಿ ನಮೂದಾಗಿರುವುದು ಗಮನಕ್ಕೆ ಬಂದಲ್ಲಿ ಅದನ್ನು ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.