
ಬೆಂಗಳೂರು: ತನ್ನ ಸಿಬ್ಬಂದಿಗೆ ಪಾವತಿಸಬೇಕಾದ ಭವಿಷ್ಯ ನಿಧಿ ಮೊತ್ತವನ್ನು ವೇತನದೊಂದಿಗೆ ಸೇರಿಸಿ ಉದ್ಯೋಗದಾತ ಸಂಸ್ಥೆಯು ಪಾವತಿ ಮಾಡಿದಲ್ಲಿ ಅದು ಅಪರಾಧವಲ್ಲ ಎಂದು ಹೈಕೋರ್ಟ್ ಸ್ಪಷ್ಟ ನೀಡಿದೆ.
ದಾಸರಹಳ್ಳಿ ಶಾಸಕ ಮುನಿರಾಜು ಅವರ ಪುತ್ರಿ ಸ್ವಪ್ನ ಕಾರ್ಯದರ್ಶಿಯಾಗಿರುವ ಶ್ರೀ ಬಾಲಾಜಿ ಚಾರಿಟಬಲ್ ಟ್ರಸ್ಟ್ ವಿರುದ್ಧ ದಾಖಲಾಗಿದ್ದ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣೆ ನ್ಯಾಯಾಲಯದ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.
ಸಿಬ್ಬಂದಿ ವೇತನದಿಂದ ಭವಿಷ್ಯ ನಿಧಿ ಮೊತ್ತ ಕಡಿತಗೊಳಿಸಿ ಭವಿಷ್ಯ ನಿಧಿ ಸಂಸ್ಥೆಗೆ ಪಾವತಿಸದಿದ್ದಲ್ಲಿ ಅಪರಾಧವಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ಸಿಬ್ಬಂದಿ ಭವಿಷ್ಯ ನಿಧಿ ಮೊತ್ತವನ್ನು ವೇತನದೊಂದಿಗೆ ಪಾವತಿಸಿದ್ದು, ಯಾವುದೇ ಮೊತ್ತವನ್ನು ತಮ್ಮಲ್ಲಿ ಉಳಿಸಿಕೊಂಡಿಲ್ಲ. ಈ ಸಂಬಂಧ ಯಾವುದೇ ಸಾಕ್ಷ್ಯಾಧಾರಗಳು ಕೂಡ ಇಲ್ಲ. ಹಾಗಾಗಿ ಅರ್ಜಿದಾರರನ್ನು ನಂಬಿಕೆ ದ್ರೋಹ ಆರೋಪದಲ್ಲಿ ವಿಚಾರಣೆಗೆ ಒಳಪಡಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಅರ್ಜಿದಾರರು ಬಾಲಾಜಿ ಎಜುಕೇಶನ್ ಟ್ರಸ್ಟ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಟ್ರಸ್ಟಿ ಹಾಗೂ ಕಾರ್ಯದರ್ಶಿಗಳಾಗಿದ್ದಾರೆ. ಟ್ರಸ್ಟ್ ವತಿಯಿಂದ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜು ನಡೆಸುತ್ತಿದ್ದು, ಬಾಕಿ ಉಳಿಸಿಕೊಂಡಿದ್ದ ಶಾಲಾ ಸಿಬ್ಬಂದಿಯ ಭವಿಷ್ಯ ನಿಧಿ ಮೊತ್ತ ಪಾವತಿಸುವಂತೆ ಕೋರಿ ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆ ಜಾರಿ ಅಧಿಕಾರಿ ನೋಟಿಸ್ ನೀಡಿದ್ದರು. ಅರ್ಜಿದಾರರು ಬಾಕಿ ಮೊತ್ತ ಪಾವತಿಸಿ ರಶೀದಿ ಪಡೆದುಕೊಂಡಿದ್ದರು.