ಗೂಗಲ್ ಟ್ರಾನ್ಸ್ ಲೇಟ್ ನಲ್ಲಿ ತುಳು ಭಾಷೆ ಸೇರ್ಪಡೆ ಮಾಡಲಾಗಿದೆ. ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆ ಸೇರ್ಪಡೆ, ಅಧಿಕೃತ ಭಾಷೆ ಸ್ಥಾನಮಾನ ಬೇಡಿಕೆಯನ್ನು ಈಡೇರಿಸಲು ಸರ್ಕಾರಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಜಗತ್ತಿನ ದೈತ್ಯ ಸಂಸ್ಥೆಯಾಗಿರುವ ಗೂಗಲ್ ತುಳುವಿಗೆ ಸ್ಥಾನ ನೀಡಿದೆ.
ಇದೇ ಮೊದಲ ಬಾರಿಗೆ ಗೂಗಲ್ ಟ್ರಾನ್ಸ್ ಲೇಟ್ ನಲ್ಲಿ ತುಳು ಭಾಷೆ ಸೇರ್ಪಡೆಗೊಂಡಿದೆ. ಇನ್ನು ಮುಂದೆ ತುಳುವೇತರರು ತುಳು ಭಾಷೆ ಕಲಿಯಲು ಇದರಿಂದ ಅನುಕೂಲವಾಗುತ್ತದೆ. ಯಾರ ಸಹಾಯವೂ ಇಲ್ಲದೆ ತುಳುವಿನ ಪದಬಳಕೆಯನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ಜಗತ್ತಿನ ಒಟ್ಟು 110 ಭಾಷೆಗಳನ್ನು ಗೂಗಲ್ ಟ್ರಾನ್ಸ್ ಲೇಟ್ ಗೆ ಸೇರ್ಪಡೆ ಮಾಡಿರುವುದಾಗಿ ಗೂಗಲ್ ತಿಳಿಸಿದ್ದು, ಇದರಲ್ಲಿ ತುಳು ಭಾಷೆ ಕೂಡ ಸೇರಿದೆ.