
ಬಾಲಿವುಡ್ ಚಿತ್ರರಂಗದ ಹಿರಿಯ ನಟಿ ಹಾಗೂ ಕಾಜೋಲ್ ಅವರ ತಾಯಿ ತನುಜಾ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 80 ವರ್ಷದ ತನುಜಾ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ಕಳೆದ ರಾತ್ರಿ ತೀವ್ರವಾಗಿ ಅಸ್ವಸ್ಥಗೊಂಡ ತನುಜಾ ಅವರನ್ನು ಕೂಡಲೇ ಜುಹು ಭಾಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಜಯ್ ದೇವಗನ್ ಅವರ ಅತ್ತೆಯೂ ಆಗಿರುವ ತನುಜಾ ಕೂಡ ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರ ನಿರ್ಮಾಪಕ ಕುಮಾರಸೇನ್ ಸಮರ್ಥ್ ಹಾಗೂ ನಟಿ ಶೋಭನಾ ಸಮರ್ಥ್ ಪುತ್ರಿಯಾಗಿರುವ ತನುಜಾ ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು. 1950ರಲ್ಲಿ ‘ಹಮಾರಿ ಭೇಟಿ’ ಚಿತ್ರಕ್ಕೆ ಬಣ್ಣ ಹಚ್ಚಿದ್ದ ತನುಜಾ 1961ರಲ್ಲಿ ‘ಹಮಾರಿ ಯಾದ್ ಆಯೆಗಿ’ ಚಿತ್ರದಲ್ಲಿ ನಾಯಕ ನಟಿಯಾಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ತನುಜಾ ಅವರ ಪತಿ ಶೋಮು ಮುಖರ್ಜಿ ಕೂಡ ಚಿತ್ರ ನಿರ್ಮಾಪಕರಾಗಿದ್ದು, ಹಲವು ಚಿತ್ರಗಳನ್ನು ನಿರ್ಮಿಸಿದ್ದರು.