ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಬಿಜೆಪಿ ನಾಯಕಿ ಹಾಗೂ ನಟಿ ಶ್ರುತಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಪಕ್ಷದ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.
ಜೆಡಿಎಸ್ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಎಸ್.ಪಿ. ಪ್ರದೀಪ್ ಕುಮಾರ್ ದೂರು ನೀಡಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ ನಟಿ ಶ್ರುತಿ, ರಾಜ್ಯದಲ್ಲಿ ಬೇರೆಯವರ ವಂಶ ಉದ್ಧಾರವಾಗಬೇಕಾದರೆ ಜೆಡಿಎಸ್ ಗೆ ಮತ ಹಾಕಿ. ನಿಮ್ಮ ವಂಶ ಬಿಟ್ಟು ಬೇರೆ ದೇಶದವರ ವಂಶ ಉದ್ಧಾರವಾಗಬೇಕಾದರೆ ಕಾಂಗ್ರೆಸ್ ಗೆ ಮತ ಹಾಕಿ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ಪಕ್ಷವನ್ನು ಒಂದು ವಂಶಕ್ಕೆ ಹೋಲಿಕೆ ಮಾಡಿ ನಿಂದಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದೂರು ನೀಡಲಾಗಿದೆ.