ಹೈದರಾಬಾದ್: ಕನ್ನಡ ಕಿರುತೆರೆ ಖ್ಯಾತ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಶೋಭಿತಾ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಡೆತ್ ನೋಟ್ ಪತ್ತೆಯಾಗಿದೆ.
‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಹೈದರಾಬಾದ್ ನ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಮದುವೆ ಬಳಿಕ ಶೋಭಿತಾ ಹೈದರಾಬಾದ್ ನಲ್ಲಿ ಪತಿಯೊಂದಿಗೆ ವಾಸವಾಗಿದ್ದರು. ಇದೀಗ ಇದ್ದಕ್ಕಿದ್ದಂತೆ ಶೋಭಿತಾ ಆತ್ಮಹತ್ಯೆಗೆ ಶರಣಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಹೈದರಾಬಾದ್ ನ ಗಚ್ಚಿಬೌಲಿ ಪೊಲೀಸರು ಶೋಭಿತಾ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಶೋಭಿತಾ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಪತ್ರವೊಂದು ಪತ್ತೆಯಾಗಿದೆ. ಅದರಲ್ಲಿ ‘ಜೀವನದಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿದೆ….ನೀನು ಸಾಯಬಹುದು ಅಂದ್ರೆ ನೀನು ಸಾಯಬಹುದು….’ ಎಂದು ಬರೆಯಲಾಗಿದೆ. ಶೋಭಿತಾ ಪತ್ರದಲ್ಲಿ ಬರೆದಿರುವ ಅಂಶಗಳ ಬಗ್ಗೆ ಪೊಲಿಸರು ತನಿಖೆ ನಡೆಸಿದ್ದಾರೆ.
ಶೋಭಿತಾಳಿಗೆ ಖಿನ್ನತೆ ಇತ್ತೆ? ಅಥವಾ ಪತಿಯೊಂದಿಗೆ ಭಿನ್ನಾಭಿಪ್ರಾಯವೇನಾದರೂ ಇತ್ತೆ? ಎಂಬ ನಿಟ್ಟಿನಲ್ಲಿಯೂ ತನಿಖೆ ಕೈಗೊಂಡಿದ್ದಾರೆ. ಇನ್ನು ಶೋಭಿತಾ ಪತಿ ಗೋವಾಕ್ಕೆ ತೆರಳಿದ್ದರಂತೆ. ಇದೇ ಸಂದರ್ಭದಲ್ಲಿ ಶೋಭಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.