ಆಧುನಿಕ ಭಾರತೀಯ ನಾರಿಯರು ಸೋಂಬೇರಿಗಳು ಹಾಗೂ ತಮ್ಮ ಬಾಯ್‌ಫ್ರೆಂಡ್‌ಗಳು ಮತ್ತು ಗಂಡಂದಿರನ್ನು ದುಡ್ಡು ಹಾಗೂ ಇನ್ನಿತರ ಪ್ರಯೋಜನಗಳಿಗೆ ಚೆನ್ನಾಗಿ ಬಳಸಿಕೊಳ್ಳುತ್ತಾರೆ ಎಂದು ಹೇಳಿದ್ದ ಸೋನಾಲಿ ಕುಲಕರ್ಣಿ ಇದೀಗ ವಿವಾದಕ್ಕೆ ಸಿಲುಕಿದ್ದಾರೆ.
ಭುಪೇಂದ್ರ ಸಿಂಗ್ ರಾಥೋರ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ್ದ ಸೋನಾಲಿ, ಭಾರತೀಯ ಮಹಿಳೆಯರು ಇತ್ತೀಚೆಗೆ ತಮ್ಮ ಬೇಡಿಕೆಗಳನ್ನು ಬಹಳ ಆಕ್ರಮಣಶೀಲವನ್ನಾಗಿಸಿದ್ದು, ಯಾವಾಗಲೂ ಇದಕ್ಕಾಗಿಯೇ ತುದಿಯಲ್ಲಿ ನಿಂತಿರುತ್ತಾರೆ ಎಂದಿದ್ದು, ಬಹಳ ಚಿಕ್ಕ ವಯಸ್ಸಿನಲ್ಲೇ ದುಡಿಯಲು ಒತ್ತಡ ಎದುರಿಸುವ ತಮ್ಮ ಸಹೋದರರು, ತನ್ನ ಪತಿ ಹಾಗೂ ಇತರ ಪುರುಷರಿಗೆ ’ಕಣ್ಣೀರು’ ಹಾಕುವಂತಾಗಿದೆ ಎಂದಿದ್ದಾರೆ.
“ನಮ್ಮ ದೇಶದಲ್ಲಿ ಬಹಳಷ್ಟು ಮಹಿಳೆಯರು ಸೋಂಬೇರಿಗಳು ಎಂಬುದನ್ನು ಮರೆಯುತ್ತೇವೆ. ಅವರು ಚೆನ್ನಾಗಿ ದುಡಿಯುವ/ಮನೆ ಇರುವ ಹಾಗೂ ನಿರಂತರ ಆದಾಯ ಬರುವ ಬಾಯ್‌ಫ್ರೆಂಡ್ ಹಾಗೂ ಪತಿಯರನ್ನು ಬಯಸುತ್ತಾರೆ,” ಎಂದ ಸೋನಾಲಿ, ಮಹಿಳೆಯರು ಸಹ ಆತ್ಮನಿರ್ಭರತೆ ಮೈಗೂಡಿಸಿಕೊಂಡು ದುಡಿಯುವ ಮೂಲಕ ತಮ್ಮ ಗಂಡಂದಿರಿಗೆ ಮನೆಯ ಖರ್ಚುವೆಚ್ಚ ನಿಭಾಯಿಸಲು ನೆರವಾಗಬೇಕು ಎಂದಿದ್ದಾರೆ.
ನಿರೀಕ್ಷೆಯಂತೆಯೇ ಸೋನಾಲಿರ ಈ ಹೇಳಿಕೆಗಳಿಗೆ ಮಹಿಳಾ ಪರರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
“ಸೂಕ್ಷ್ಮ ಸಂವೇದನೆ ಇಲ್ಲದ ಮಾತು ! ಮನೆಗೆಲಸಗಳನ್ನು ಜೊತೆಯಾಗಿ ನಿಭಾಯಿಸುತ್ತಿರುವ ವೇಳೆ ಆಧುನಿಕ ಮಹಿಳೆಯರು ಸೋಂಬೇರಿಗಳು ಎಂದು ಹೇಳುತ್ತಿರಿ. ಚೆನ್ನಾಗಿ ಸಂಪಾದನೆ ಮಾಡುವ ಪತಿಯನ್ನು ಬಯಸುವುದರಲ್ಲಿ ಏನು ತಪ್ಪಿದೆ ? ಶತಮಾನಗಳ ಮಟ್ಟಿಗೆ ಮಹಿಳೆಯರನ್ನು ಮಕ್ಕಳನ್ನು ಹೆರುವ ಯಂತ್ರಗಳನ್ನಾಗಿ ಪುರುಷರು ನೋಡಿಕೊಂಡು ಬಂದಿದ್ದಾರೆ” ಎಂದು ಹೇಳುವ ಮೂಲಕ ನಟಿ ಉರ್ಫಿ ಜಾವೇದ್, ಸೋನಾಲಿ ಮಾತಿಗೆ ತಿರುಗೇಟು ಕೊಟ್ಟಿದ್ದಾರೆ.
“ಮ್ಯಾಟ್ರಿಮೋನಿಯಲ್ ಕಾಲಂಗಳನ್ನು ಒಮ್ಮೆ ಪರೀಕ್ಷಿಸಿ ನೋಡಿ. ಚೆನ್ನಾಗಿ ಕಾಣುವ, ಸುಶಿಕ್ಷಿತ, ಹೋಮ್ಲಿಯಾಗಿರುವ, ಅತ್ತೆ-ಮಾವಂದಿರನ್ನು ನೋಡಿಕೊಳ್ಳುವ, ತಿಂಗಳ ಸಂಬಳವನ್ನು ಕೈಗೆ ತಂದುಕೊಡಬೇಕೆನ್ನುವ ಬೇಡಿಕೆಗಳನ್ನೆಲ್ಲಾ ಇಡಲಾಗುತ್ತದೆ,” ಎಂದು ಸೋನಾ ಮೊಹಪಾತ್ರ ಹೇಳಿದ್ದಾರೆ.
“ಸೋಂಬೇರಿ ಎನ್ನುವ ಪದ ಮನೆಯೊಡತಿಯರನ್ನು ನೇರವಾಗಿ ದಾಳಿ ಮಾಡುವಂಥದ್ದಾಗಿದೆ. ಮನೆಗೆಲಸ ಕೆಲಸ ಅಲ್ಲವೇ ? ಆಯ್ಕೆ ಕೊಟ್ಟರೆ ಯಾವ ಮಹಿಳೆಗೆ ತಾನೇ ಕಾರ್ಪೋರೇಟ್ ಕೆಲಸ ಬಿಟ್ಟು ಬೇರೆಯವರಿಗೆ ಕಾಳಜಿ ಮಾಡುವುದನ್ನೇ ಆರಿಸಿಕೊಳ್ಳಬೇಕೆನಿಸುತ್ತದೆ? ’ಸತ್ಯ’ ಹೇಳುವ ಮೂಲಕ ನೀವು ಹೋಗಿ ಗಂಡಸರ ನಾಲ್ಕು ಚಪ್ಪಾಳೆ ಪಡೆದುಕೊಳ್ಳಿ. ಈ ಮಾತುಗಳನ್ನಾಡುವ ಮೂಲಕ ನೀವು ದೇಶದ 80%ಗೂ ಹೆಚ್ಚು ಮಹಿಳೆಯರಿಗೆ ಬೇಸರ ಮಾಡಿದ್ದೀರಿ. ಅವರನ್ನು ಈಗ ಸೋಂಬೇರಿಗಳು ಎಂದು ಕರೆಯಲಾಗುತ್ತದೆ,” ಎಂದು ಕಾಜೋಲ್ ಶ್ರೀನಿವಾಸನ್ ಎಂಬುವವರು ಹೇಳಿದ್ದಾರೆ.