ಸ್ಯಾಂಕಿ ರಸ್ತೆಯಲ್ಲಿರುವ ಬೆಂಗಳೂರಿನ ಪ್ರಸಿದ್ಧ ಥಿಯೇಟರ್ ಕಾವೇರಿ ಇನ್ಮುಂದೆ ಸಿಲಿಕಾನ್ ಸಿಟಿ ಮಂದಿಗೆ ನೆನಪಾಗಿ ಮಾತ್ರ ಉಳಿಯಲಿದೆ. ಒಂದು ಕಾಲದಲ್ಲಿ ಖ್ಯಾತ ಕಲಾವಿದರ ಚಿತ್ರಗಳನ್ನು ತಿಂಗಳಾನುಗಟ್ಟಲೆ ಪ್ರದರ್ಶಿಸಿದ ಈ ಸಿಂಗಲ್ ಸ್ಕ್ರೀನ್ ಥಿಯೇಟರ್ ಕೆಲವೇ ದಿನಗಳಲ್ಲಿ ಬಂದ್ ಆಗಲಿದ್ದು ಇಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗುತ್ತದೆ.
ಥಿಯೇಟರ್ ಬಗ್ಗೆ ಹಲವು ನೆನಪುಗಳನ್ನು ಹಂಚಿಕೊಂಡಿರುವ ನಟ ರಮೇಶ್ ಅರವಿಂದ್, “ಅಲ್ಲಿ ನನ್ನ ಚಲನಚಿತ್ರಗಳ ಪ್ರದರ್ಶನದ ಬಗ್ಗೆ ಅಚ್ಚುಮೆಚ್ಚಿನ ನೆನಪುಗಳಿವೆ. ನನ್ನ ಚಲನಚಿತ್ರಗಳನ್ನಷ್ಟೇ ಅಲ್ಲ, ಅಲ್ಲಿ ನಾನು ಅನೇಕ ಉತ್ತಮ ಚಲನಚಿತ್ರಗಳನ್ನು ನೋಡಿದ್ದೇನೆ. ಮೆಟ್ಟಿಲುಗಳಿಂದ ಪಾರ್ಕಿಂಗ್ ಪ್ರದೇಶದವರೆಗೆ ವಾಸ್ತುಶಿಲ್ಪವು ವಿಶಿಷ್ಟವಾಗಿತ್ತು. ಇಡೀ ಪ್ರದೇಶ ದೊಡ್ಡದಾಗಿದ್ದು ಅಲ್ಲಿ ವಾಹನ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶವಿತ್ತು. ಆದರೆ ಈಗ ಕಾಲ ಬದಲಾಗುತ್ತಿರುವಂತೆ ಭಾಸವಾಗುತ್ತಿದೆ. ಥಿಯೇಟರ್ ಮುಚ್ಚಲು ಮಾಲೀಕರಿಗೆ ಅವರದ್ದೇ ಆದ ಕಾರಣಗಳಿವೆ ಎಂದು ನನಗೆ ಖಾತ್ರಿಯಿದೆ. ಕಳೆದ ಕೆಲವು ವರ್ಷಗಳಿಂದ ಕಾವೇರಿಯಂತಹ ಅನೇಕ ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಕಾಲ ಬದಲಾಗುತ್ತಿರುವ ರೀತಿಯಲ್ಲಿಯೇ ಭಾಸವಾಗುತ್ತಿದೆ” ಎಂದು ಹೇಳಿದ್ದಾರೆ.
ಚಿತ್ರ ನಿರ್ಮಾಪಕ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನೆನಪುಗಳನ್ನು ಹಂಚಿಕೊಳ್ಳುತ್ತಾ, ನನ್ನ ಚಲನಚಿತ್ರ ಅಮೇರಿಕಾ ಅಮೇರಿಕಾವನ್ನು 100 ದಿನಗಳವರೆಗೆ ಪ್ರದರ್ಶಿಸಿದ 6 ಚಿತ್ರಮಂದಿರದಲ್ಲಿ ಶಾಶ್ವತವಾಗಿ ಬಾಗಿಲು ಬಂದ್ ಮಾಡುತ್ತಿರುವ ಕೊನೆಯ ಚಿತ್ರಮಂದಿರ ಕಾವೇರಿ. ಚಲನಚಿತ್ರ ಮುಚ್ಚುವ ಸುದ್ದಿ ಹೃದಯ ವಿದ್ರಾವಕವಾಗಿದೆ. ಥಿಯೇಟರ್ ಗಳನ್ನು ಕೆಡವಬಹುದು ಆದರೆ ನೆನಪುಗಳನ್ನಲ್ಲ! ಬದಲಾವಣೆಗಳನ್ನು ನಾವು ತಡೆಯಲು ಸಾಧ್ಯವಿಲ್ಲ. ಥಿಯೇಟರ್ ವಾಣಿಜ್ಯ ಆಸ್ತಿಯಾಗಿರಬಹುದು, ಆದರೆ ಚಿತ್ರ ನಿರ್ಮಾಪಕರು ಮತ್ತು ಪ್ರೇಕ್ಷಕರಿಗೆ ಅದು ಅನೇಕ ನೆನಪುಗಳಿಂದ ತುಂಬಿದ ಸಾಂಸ್ಕೃತಿಕ ವೇದಿಕೆಯಾಗಿದೆ ಎಂದಿದ್ದಾರೆ.
ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಹ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾ, “ಕಾವೇರಿ ಬಹಳ ಸುಂದರವಾದ ಥಿಯೇಟರ್ ಆಗಿತ್ತು, ಆದರೆ ಮಲ್ಟಿಪ್ಲೆಕ್ಸ್ ಗಳ ಏರಿಕೆಯು ಈ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳನ್ನು ಬದಿಗಿಟ್ಟಿದೆ. ಈ ಚಿತ್ರಮಂದಿರಗಳನ್ನು ಉಳಿಸಿಕೊಳ್ಳಲು ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಬೆಂಬಲವಿಲ್ಲ. ಯುರೋಪ್‌ನಲ್ಲಿ, ಅಂತಹ ಚಿತ್ರಮಂದಿರಗಳು ಜನರು ಭೇಟಿಯಾಗುವ ಸ್ಥಳಗಳಾಗಿವೆ. ಐತಿಹಾಸಿಕ ಚಿತ್ರಮಂದಿರಗಳನ್ನು ಮುಚ್ಚಲು ಪ್ರಾರಂಭಿಸಿದಾಗ ಚಲನಚಿತ್ರಗಳ ಬಗ್ಗೆ ವಿಚಾರಗಳನ್ನು ಹಂಚಿಕೊಳ್ಳಲು ಅಂತಹ ಥಿಯೇಟರ್‌ಗಳನ್ನು ಜೀವಂತವಾಗಿಡಲು ಅನೇಕ ಪ್ರೋತ್ಸಾಹಗಳನ್ನು ಅಲ್ಲಿ ನೀಡಲಾಗುತ್ತದೆ. ಮಲ್ಟಿಪ್ಲೆಕ್ಸ್ ಗಳ ಸ್ಪರ್ಧೆ ನಡುವೆ ಈ ಚಿತ್ರಮಂದಿರಗಳನ್ನು ನಿರ್ವಹಿಸುವುದು ತುಂಬಾ ದುಬಾರಿಯಾಗಿದೆ ಎಂದಿದ್ದಾರೆ.
ನಟ ಮತ್ತು ನಿರ್ದೇಶಕ ನಿರೂಪ್ ಭಂಡಾರಿ ಮಾತನಾಡಿ, ನಾನು ಚಿಕ್ಕವನಿದ್ದಾಗ ಬೆಂಗಳೂರಿಗೆ ಬಂದಾಗಲೆಲ್ಲ ಕಾವೇರಿ ಥಿಯೇಟರ್ ಬಳಿಯ ಫ್ಯಾಮಿಲಿ ಫ್ರೆಂಡ್ ಮನೆಯಲ್ಲಿ ಇರುತ್ತಿದ್ದೆವು. ಕೆಲಸದ ನಂತರ ಅಪ್ಪ ನಮ್ಮನ್ನು ಕಾವೇರಿಗೆ ಕರೆದುಕೊಂಡು ಹೋಗುತ್ತಿದ್ದರು. ಪದವಿ ಮುಗಿಸುವವರೆಗೂ ನನಗೆ ಗೊತ್ತಿದ್ದ ಚಿತ್ರಮಂದಿರ ಅದೊಂದೇ. ಹವಾನಿಯಂತ್ರಿತ ಥಿಯೇಟರ್‌ನಲ್ಲಿ ಇಲ್ಲಿನದ್ದು ನನ್ನ ಮೊದಲ ಅನುಭವ ಎಂದು ನಾನು ನೆನಪಿಸಿಕೊಳ್ಳುತ್ತೇನೆ. ಚಲನಚಿತ್ರ ಆರಂಭವಾದ ಸುಮಾರು 20-30 ನಿಮಿಷಗಳಲ್ಲಿ ನನಗೆ ಸಾಕಷ್ಟು ಚಳಿಯಾಗುತ್ತಿತ್ತು. ಆಗ ನನ್ನ ತಂದೆ ಥಿಯೇಟರ್ ಸಿಬ್ಬಂದಿಗೆ ಎಸಿ ಕಡಿಮೆ ಮಾಡಲು ವಿನಂತಿಸುತ್ತಿದ್ದರು ಎಂದಿದ್ದಾರೆ.
ನಟಿ ಶರ್ಮಿಳಾ ಮಾಂಡ್ರೆ ಕೂಡ ಕಾವೇರಿ ಥಿಯೇಟರ್ ಮುಚ್ಚುತ್ತಿರುವ ಬಗ್ಗೆ ಮಾತನಾಡಿ, “ಇದೊಂದು ದುಃಖದ ಸುದ್ದಿ. ಕಾವೇರಿ ಚಿತ್ರಮಂದಿರ ನನ್ನ ಅಚ್ಚುಮೆಚ್ಚಿನದು. ಇದು ನನ್ನ ತಾಯಿ ಮತ್ತು ನನಗೆ ಹೆಚ್ಚಿನ ನೆನಪನ್ನು ನೀಡಿದೆ. ಶಾಲೆ ಮುಗಿದ ಬಳಿಕ ಚಲನಚಿತ್ರ ರಸಿಕರಾದ ನಾವು ಸಂಜೆ ಪ್ರದರ್ಶನಕ್ಕೆ ಹೋಗುತ್ತಿದ್ದೆವು. ಶನಿವಾರ ಮ್ಯಾಟ್ನಿ ಪ್ರದರ್ಶನಕ್ಕೆ ತೆರಳುತ್ತಿದ್ದೆವು. ಇದು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ ಮತ್ತು ನಾನು ಆ ನೆನಪುಗಳನ್ನು ಯಾವಾಗಲೂ ಸ್ಮರಿಸುತ್ತೇನೆ ಎಂದಿದ್ದಾರೆ.