ಖ್ಯಾತ ನಟ ಪುನೀತ್ ರಾಜ್ಕುಮಾರ್ ಸಾವಿನ ವಾರ್ತೆ ಕನ್ನಡ ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಬಾಲನಟನಾಗಿ ಮಿಂಚಿ ನಾಯಕ ನಟನಾಗಿಯೂ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದ ಪುನೀತ್ ಇಂದು ಎಲ್ಲವನ್ನೂ ತೊರೆದು ಇಹಲೋಕ ತ್ಯಜಿಸಿದ್ದಾರೆ.
ಪುನೀತ್ ರಾಜ್ಕುಮಾರ್ ನಿಧನವನ್ನು ಅರಗಿಸಿಕೊಳ್ಳಲಾಗದ ಕನ್ನಡ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಚಂದನವನದ ಖ್ಯಾತ ಗಾಯಕ ಗುರುಕಿರಣ್ ಅಪ್ಪು ಜೊತೆ ಕಳೆದ ಕೊನೆಯ ಕ್ಷಣಗಳನ್ನು ನೆನೆದು ಕಣ್ಣೀರಾಗಿದ್ದಾರೆ. ನಿನ್ನೆ ಗುರುಕಿರಣ್ ಜನ್ಮದಿನದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಪುನೀತ್ ಅವರ ಮನೆಗೆ ಭೇಟಿ ನೀಡಿದ್ದರಂತೆ. ಆರೋಗ್ಯವಾಗಿಯೇ ಇದ್ದ ಪುನೀತ್ ರಾತ್ರಿ 12ರ ವರೆಗೂ ಗುರುಕಿರಣ್ ಜೊತೆ ಮುಂದಿನ ಸಿನಿಮಾಗಳ ಬಗ್ಗೆ, ಜೀವನದ ಬಗ್ಗೆ ಸಾಕಷ್ಟು ಮಾತುಗಳನ್ನಾಡಿದ್ದರಂತೆ.
ಬದುಕಿದ್ದಾಗಲೂ ಅನಾಥಾಶ್ರಮ, ವೃದ್ದಾಶ್ರಮಗಳನ್ನು ನಡೆಸುವ ಮೂಲಕ ನಿರಾಶ್ರಿತರ ಪಾಲಿಗೆ ಕಣ್ಣಾಗಿದ್ದ ನಟ ಪುನೀತ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಪುನೀತ್ ರಾಜ್ಕುಮಾರ್ ಕುಟುಂಬ ಅವರ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದೆ. ಈ ಮೂಲಕ ಪುನೀತ್ ನಿಧನರಾದರೂ ಇನ್ನೊಬ್ಬರ ಬಾಳಲ್ಲಿ ಬೆಳಕಾಗುತ್ತಿದ್ದಾರೆ.
ನಟ ಪುನೀತ್ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಸಂತಾಪ ಸೂಚಿಸಿದ್ದಾರೆ. ಪುನೀತ್ ಚಿಕ್ಕ ವಯಸ್ಸಿನಿಂದಲೇ ಅಪಾರ ಸಾಧನೆ ಮಾಡಿದಂತವರು. ನಾಡು – ನುಡಿ ಹಾಗೂ ಸಮಾಜಕ್ಕೆ ಮಿಡಿಯುತ್ತಿದ್ದ ಇಂತಹ ಅಪ್ರತಿಮ ನಟನನ್ನು ಕಳೆದುಕೊಂಡ ಕರುನಾಡು ಅಕ್ಷರಶಃ ಬಡವಾಗಿದೆ . ಪುನೀತ್ ಕುಟುಂಬಕ್ಕೆ ಆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.