ನವದೆಹಲಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ, ಬಾಲಿವುಡ್ ನಟ ನುಶ್ರತ್ ಭರುಚ್ಚಾ ಅವರು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವರ ತಂಡದ ಸದಸ್ಯರೊಬ್ಬರು ಶನಿವಾರ ತಿಳಿಸಿದ್ದಾರೆ.
ನುಶ್ರತ್ ದುರದೃಷ್ಟವಶಾತ್ ಇಸ್ರೇಲ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರು ಹೈಫಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಅಲ್ಲಿಗೆ ತೆರಳಿದ್ದರು ಎಂದು ಹೇಳಿದ್ದಾರೆ.
ನಾನು ನುಶ್ರತ್ ಅವರೊಂದಿಗೆ ಕೊನೆಯ ಬಾರಿಗೆ ಮಧ್ಯಾಹ್ನ ಸುಮಾರು 12.30 ರ ಸುಮಾರಿಗೆ ಸಂಪರ್ಕ ಸಾಧಿಸಲು ಸಾಧ್ಯವಾಯಿತು. ನೆಲಮಾಳಿಗೆಯಲ್ಲಿ ಸುರಕ್ಷಿತವಾಗಿದ್ದಾಗಿ ಹೇಳಿದ್ದರು. ಸುರಕ್ಷತಾ ಕ್ರಮಗಳಿಗಾಗಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದಿದ್ದರು. ಆದರೆ, ನಂತರದಲ್ಲಿ ಅವರನ್ನು ನಾವು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ನಾವು ನುಶ್ರತ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು ಶನಿವಾರ ಗಾಜಾ ಪಟ್ಟಿಯಲ್ಲಿರುವ ಉಗ್ರಗಾಮಿ ಗುಂಪು ಹಮಾಸ್ ಮತ್ತು ಇಸ್ರೇಲ್ ನಡುವೆ ಪೂರ್ಣ ಪ್ರಮಾಣದ ಯುದ್ಧ ಪ್ರಾರಂಭವಾಯಿತು, ಕನಿಷ್ಠ 200 ಜನರು ಸಾವನ್ನಪ್ಪಿದರು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇಸ್ರೇಲಿ ಸೇನೆಯ ಪ್ರಕಾರ ಹಮಾಸ್ ಉಗ್ರಗಾಮಿಗಳು ಗಾಜಾ ಪಟ್ಟಿಯಿಂದ ಇಸ್ರೇಲ್‌ಗೆ 5,000 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿದ್ದು, ಗಡಿಯ ಬಳಿ ಹಲವಾರು ಇಸ್ರೇಲಿ ಸೈನಿಕರನ್ನು ವಶಪಡಿಸಿಕೊಂಡಿದ್ದಾರೆ.