![](https://kannadadunia.com/wp-content/uploads/2023/10/nagabhushan-1.jpg)
ಬೆಂಗಳೂರು: ಕಾರು ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನಟ ನಾಗಭೂಷಣ್, ಅದು ಆಕಸ್ಮಿಕವಾಗಿ ನಡೆದ ಅಪಘಾತ. ಮಹಿಳೆ ಸಾವನ್ನಪ್ಪಿದ್ದಾರೆ. ಇನ್ನೋರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಿಳೆಯನ್ನು ನಾನೇ ಆಸ್ಪತ್ರೆಗೆ ಸೇರಿಸಿ ಪೊಲೀಸರಿಗೆ ನಾನೇ ಕರೆ ಮಾಡಿ ಮಾಹಿತಿ ನೀಡಿದ್ದೆ ಎಂದರು.
ಆಸ್ಪತ್ರೆಯಲ್ಲಿ ಮಹಿಳೆ ಸಾವನ್ನಪ್ಪಿದರು. ಪೊಲೀಸರು ನನ್ನನ್ನು ಕರೆದುಕೊಂಡು ಹೋಗಿ ಪ್ರಕ್ರಿಯೆಗಳನ್ನು ಮುಗಿಸಿದರು. ನಾನು ಆಲ್ಕೋಹಾಲ್ ಸೇವಿಸಿದ್ದೇನೆ ಎಂದು ಪರೀಕ್ಷಿಸಿದರು. ಬ್ಲಡ್ ಟೆಸ್ಟ್ ಕೂಡ ಮಾಡಲಾಯಿತು. ನಾನು ಆಲ್ಕೋಹಾಲ್ ತೆಗೆದುಕೊಂಡಿರಲಿಲ್ಲ. ವರದಿಯಲ್ಲಿಯೂ ಹಾಗೆ ಬಂದಿದೆ ಎಂದರು.
ತಾಯಿಯನ್ನು ಕಳೆದುಕೊಂಡಿರುವ ಆ ಕುಟುಂಬದ ನೋವು ನನಗೆ ಅರ್ಥವಾಗುತ್ತದೆ. ಆಕಸ್ಮಿಕವಾಗಿ ನಡೆದ ಅಪಘಾತವದು. ನಾನು ಕೂಡ ಚಿಕ್ಕಂದಿನಲ್ಲಿ ಅಪಘಾತದಲ್ಲಿ ತಂದೆಯನ್ನು ಕಳೆದುಕೊಂಡಿದ್ದೇನೆ. ಅಪಘಾತ ಮಾಡಿದವರು ಯಾರು ಎಂದು ಈಗಲೂ ಗೊತ್ತಿಲ್ಲ. ಆ ನೋವು ಏನೆಂದು ನನಗೆ ಗೊತ್ತು. ಅವರ ನೋವಿನಲ್ಲಿ ನಾನು ಭಾಗಿಯಾಗುತ್ತೇನೆ. ಬೇರೆಯವರಿಗೆ ದು:ಖ ಕೊಡುವ ಉದ್ದೇಶ ನನ್ನದಲ್ಲ. ಎಲ್ಲರನ್ನೂ ಖುಷಿಯಾಗಿಡಬೇಕು ಎಂಬುದೇ ನನ್ನ ಪ್ರಯತ್ನ. ಆ ಕುಟುಂಬಕ್ಕೆ ನನ್ನಿಂದ ಏನು ಸಹಾಯ ಮಾಡಲು ಸಾಧ್ಯ ಅದನ್ನು ಮಾಡುತ್ತೇನೆ ಎಂದು ಭಾವುಕರಾದರು.