ಜೈಲರ್ ಸಿನಿಮಾದಲ್ಲಿ ವಿಲನ್ ಸಹಚರನ ಪಾತ್ರದಲ್ಲಿ ನಟಿಸಿದ್ದ ತಮಿಳು ನಟ ಮಾರಿಮುತ್ತು ನಿಧನದ ವಾರ್ತೆ ಇಡೀ ತಮಿಳುನಾಡಿಗೆ ಆಘಾತ ತಂದಿದೆ. ಹೃದಯಾಘಾತದಿಂದ ಅಕಾಲಿಕ ಮರಣವನ್ನಪ್ಪಿದ ಮಾರಿಮುತ್ತು ಕೊನೆಯ ಕ್ಷಣದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ.
ರಜಿನಿಕಾಂತ್ ಅವರ ನಟನೆಯ ಜೈಲರ್ ಸಿನಿಮಾದಲ್ಲಿ ಮಾರಿಮುತ್ತು ಕೊನೆಯದಾಗಿ ನಟಿಸಿದ್ದಾರೆ. ನಿರ್ದೇಶಕ ಕೂಡ ಆಗಿರುವ ಮಾರಿಮುತ್ತು ಶುಕ್ರವಾರದಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ನಾಡಿಗರ ಸಂಗಮಂ (ದಕ್ಷಿಣ ಭಾರತೀಯ ಕಲಾವಿದರ ಸಂಘ) ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ.
ತಮಿಳು ಧಾರವಾಹಿಯೊಂದಕ್ಕೆ ಡಬ್ಬಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಮಾರಿಮುತ್ತು ಏಕಾಏಕಿ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಫೋನ್ನಲ್ಲಿ ಮಾತನಾಡುತ್ತಾ ತಮ್ಮ ಕಾರಿನ ಕಡೆಗೆ ಮಾರಿಮುತ್ತು ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಇದಾದ ಬಳಿಕ ನಟ ಮಾರಿಮುತ್ತು ಡಬ್ಬಿಂಗ್ ಸ್ಟುಡಿಯೋದಿಂದ ಹೊರಕ್ಕೆ ಕಾರಿನಲ್ಲಿ ತೆರಳುತ್ತಾರೆ. ಈ ಸಂದರ್ಭದಲ್ಲಿ ಅವರು ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಮಾರಿಮುತ್ತು ನಿಧನಕ್ಕೆ ಇಡೀ ತಮಿಳು ಚಿತ್ರರಂಗ, ಅಭಿಮಾನಿಗಳು ಹಾಗೂ ಹಿತೈಷಿಗಳು ಕಂಬನಿ ಮಿಡಿದಿದ್ದಾರೆ.