ಬೆಂಗಳೂರು: ಸಂಭಾವ್ಯ ರೈಲು ದುರಂತ ತಪ್ಪಿಸಿದ 12 ವರ್ಷದ ಬಾಲಕನ ಸಮಯ ಪ್ರಜ್ಞೆಯ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿರುವ ನಟ ಕಿಶೋರ್, ಇದೇ ಘಟನೆಯನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷವಾಗಿ ಟೀಕಿಸಿದ್ದಾರೆ.
ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಇತ್ತೀಚೆ ನಡೆದ ಘಟನೆಯೊಂದರಲ್ಲಿ 12 ವರ್ಷದ ಬಾಲಕನೊಬ್ಬ ತನ್ನ ಕೆಂಪು ಟಿಶರ್ಟ್ ಬಳಸಿ ಭಾರೀ ರೈಲು ದುರಂತವನ್ನು ತಪ್ಪಿಸಿ ಎಲ್ಲರ ಮೆಚ್ಚುಗೆ ಪಾತ್ರನಾಗಿದ್ದಾನೆ. ಸಾಹಸಿ ಬಾಲಕನ್ನು ಮುರ್ಸಲಿನ್ ಶೇಖ್ ಎಂದು ಗುರುತಿಸಲಾಗಿದೆ. ರೈಲ್ವೇ ಹಳಿಯ ಮೇಲೆ ನಡೆದು ಹೋಗುತ್ತಿದ್ದ ಶೇಖ್, ಹಾನಿಗೊಳಗಾದ ಹಳಿಯನ್ನು ಗಮನಿಸಿದ್ದಾನೆ. ಏನುಮಾಡಬೇಕು ಎಂದು ಯೋಚಿಸುವಷ್ಟರಲ್ಲಿ ರೈಲು ಬಂದೇ ಬಿಟ್ಟಿದೆ. ತಕ್ಷಣ ಬಾಲಕ ತಾನು ಧರಿಸಿದ್ದ ಕೆಂಪು ಟೀಶರ್ಟ್ ತೆಗೆದು ರೈಲು ಬರುತ್ತಿದ್ದ ಕಡೆ ಬೀಸಿದ್ದಾನೆ. ಬಾಲಕನ ಸಮಯಪ್ರಜ್ಞೆಯಿಂದ ಬಹುದೊಡ್ದ ರೈಲು ಅಪಘಾತ ತಪ್ಪಿದೆ.
ರೈಲಿನ ಲೊಕೊಮೊಟಿವ್ ಪೈಲಟ್ ಈ ಸಿಗ್ನಲ್ ಗುರುತಿಸಿ ತುರ್ತು ಬ್ರೇಕ್ ಹಾಕಿ ರೈಲು ನಿಲ್ಲಿಸಿದ್ದಾರೆ. ಸಂಭವಿಸಲಿದ್ದ ದುರಂತ ತಪ್ಪಿದೆ. ರೈಲ್ವೆ ಅಧಿಕಾರಿಗಳು ಬಾಲಕನ ಶ್ರೌರ್ಯ, ಸಮಯಪ್ರಜ್ಞೆ ಮೆಚ್ಚಿ ಪ್ರಮಾಣ ಪತ್ರ, ನಗದು ಬಹುಮಾನ ನೀಡಿ ಸತ್ಕರಿಸಿದ್ದಾರೆ. ಈ ಬಾಲಕನ ಬುದ್ದಿವಂತಿಕೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಲಕನ ಬಗ್ಗೆ ಸ್ಯಾಂಡಲ್ ವುಡ್ ನಟ ಕಿಶೋರ್ ಕೂಡ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪರೋಕ್ಷವಾಗಿ ಪ್ರಧಾನಿ ಮೋದಿಯವನ್ನು ಲೇವಡಿ ಮಾಡಿ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಲೇ ಬಾಲಕ, ನಮಗೆಲ್ಲ ಮಾದರಿಯಾದೆ ನೀನು..
ಒಮ್ಮೆ ಯೋಚಿಸಿ.. ಇವರೇನಾದರೂ ಬಟ್ಟೆಯಿಂದ ಈ ಬಾಲಕನನ್ನು ಗುರುತಿಸಿಬಿಟ್ಟಿದ್ದರೆ? ಆ ರೈಲಿನ ಚಾಲಕ ದಿನಕ್ಕೊಂದು ವಂದೇಭಾರತ ರೈಲು ಬಿಡುವ ಪ್ರಧಾನ ಸೇವಕನಾಗಿದ್ದಿದ್ದರೆ?? ರೈಲನ್ನು ಸೀದಾ ಪಾಕಿಸ್ಥಾನಕ್ಕೇ ನುಗ್ಗಿಸಿಬಿಡುತ್ತಿದ್ದನೇನೊ?? ತನ್ನ ಸ್ಥಾನದ ಗೌರವ ಘನತೆಯ ಅರಿವಿಲ್ಲದೆ, ಬಟ್ಟೆಯಿಂದ ಭವ್ಯಭಾರತದ ಪ್ರಜೆಗಳನ್ನು ವಿಭಜಿಸುವ ನಾಚಿಕೆಗೇಡು ಸಣ್ಣತನ ಬಿಟ್ಟು ರೈಲಿನೊಳಗಿರುವವರು ಯಾವ ಬಟ್ಟೆಯವರು ಎಂದು ಯೋಚಿಸದೆ ಜೀವ ಉಳಿಸಿದ ಈ ಬಾಲಕನಿಂದ ಮಾನವೀಯತೆಯ ಒಂದೆರಡು ಪಾಠ ಕಲಿತೀರೇ? ಎಂದು ಕೇಳಿದ್ದಾರೆ.
ಈ ಬಾಲಕನಿಗೆ ಶಾಲೆಯ ಮಕ್ಕಳೆಲ್ಲರ ಕೈಲಿ ಕಪಾಳಕ್ಕೆ ಹೊಡೆಸುವ, ದನ ತಿಂದರೆಂದು ಇವನ ಕೋಮಿನ ಮನುಷ್ಯರನ್ನೇ ಸಜೀವದಹನ ಮಾಡುವ ಧರ್ಮಾಂಧರಾಗುವುದ ಬಿಟ್ಟು ಮನುಷ್ಯರಾದೀರೇ? ಹಳಿತಪ್ಪಿ ಹೊರಟ ನಮ್ಮ ಜೀವನವನ್ನು ಸರಿದಾರಿಗೆ ತಂದೀರೇ? ಎಂದು ಟಾಂಗ್ ನೀಡಿದ್ದಾರೆ.