ಬೆಂಗಳೂರು: ನವದೆಹಲಿಯಲ್ಲಿ ನಡೆದಿದ್ದ ಜಿ-20 ಶೃಂಗಸಭೆ ವಿಚಾರ ಪ್ರಸ್ತಾಪಿಸಿ ಬಹುಭಾಷಾ ನಟ ಕಿಶೋರ್ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯ್ದಿದ್ದು, ಭ್ರಷ್ಟಾಚಾರದ ವಿಶ್ವ ಗುರು ಎಂದು ಕಿಡಿಕಾರಿದ್ದಾರೆ.
ಭ್ರಷ್ಟಾಚಾರದ ವಿಶ್ವಗುರು – ಜಿ 20ಕ್ಕೆ ದೇಶ ಕೊಟ್ಟ ಬಜೆಟ್ – 900 ಕೋಟಿ ಲೆಕ್ಕ ಕೊಟ್ಟದ್ದು – 4100 ಕೋಟಿ (ಶಾಶ್ವತ ಆಸ್ತಿ, ಸೌಕರ್ಯಗಳ ಹೆಸರಲ್ಲಿ). ಮಥುರಾ ರೋಡಿಗೆ ಕೊಟ್ಟ ಬಜೆಟ್ (ಕಿ. ಮೀ.ಗೆ) -18 ಕೋಟಿ. ಲೆಕ್ಕ ಕೊಟ್ಟದ್ದು (ಕಿ. ಮೀ.ಗೆ)- 256 ಕೋಟಿ. ಅದಾನಿ ಹೆಸರಲ್ಲಿ ಇನ್ನೆಷ್ಟೊ..
ಇಲ್ಲಿ ನುಂಗಿದ ಹಣದ 10% ಈ ಸ್ಲಮ್ಮುಗಳಿಗೆ ಖರ್ಚು ಮಾಡಿದ್ದರೆ ಪರದೆಯಲ್ಲಿ ಮುಚ್ಚುವ ಖರ್ಚು ಉಳಿಯುತ್ತಿರಲಿಲ್ಲವೇ ?? ಸ್ಲಂ ವಾಸಿಗಳು ಮನುಷ್ಯರಲ್ಲವೇ?ಭಾರತೀಯರಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಪ್ರಜೆಗಳ ಕೋಟಿ ಕೋಟಿ ಹಣ ಜೇಬಿಗೆ ಸೇರಿಸಿ ಪ್ರಶ್ನೆಗಳನ್ನೆದುರಿಸದೇ ಟಾಟಾ ಮಾಡಿ ಹೋದವರು, ಕೊರಳ ಪಟ್ಟಿ ಹಿಡಿದು ಪ್ರಶ್ನೆ ಕೇಳದೆ ಉಧೋ ಉಧೋ ಎನ್ನುತ್ತಾ ನಿಂತ ಮಾನಗೆಟ್ಟ ಮುಖ್ಯವಾಹಿನಿ ಮಾಧ್ಯಮಗಳು. ಇವರೆಲ್ಲರನ್ನೂ ಪ್ರಶ್ನಿಸದೆ ಬಾಯಿಮುಚ್ಚಿ ಕೂತರೆ ಇಡೀ ದೇಶಕ್ಕೇ ಪರದೆ ಹಾಕಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.
ನಟ ಕಿಶೋರ್ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಿಶೋರ್ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.