ಬೆಂಗಳೂರು: ಬಿಜಿಎಸ್ ಆಸ್ಪತ್ರೆಯಲ್ಲಿ ನಟ ದರ್ಶನ್ ಗೆ ಚಿಕಿತ್ಸೆ ಮುಂದುವರೆದಿದೆ. ಇಂದು ಕೂಡ ಕೆಲವು ಪರೀಕ್ಷೆಗಳನ್ನು ವೈದ್ಯರು ಮಾಡಲಿದ್ದಾರೆ.
ಬೆನ್ನು ನೋವು, ಕಾಲು ನೋವು ಸಂಬಂಧ ಪರೀಕ್ಷೆ ನಡೆಸಲಾಗುವುದು. ಡಾ. ನವೀನ್ ಗೌಡ ನೇತೃತ್ವದಲ್ಲಿ ದರ್ಶನ್ ಗೆ ಚಿಕಿತ್ಸೆ ನೀಡಲಾಗಿದೆ. ಸಂಜೆಯವರೆಗೆ ವೈದ್ಯಕೀಯ ಪರೀಕ್ಷೆಗಳು ನಡೆಯಲಿವೆ. ಸದ್ಯ ನೋವಿಗೆ ಔಷಧ ಮಾತ್ರ ನೀಡಲಾಗುತ್ತಿದೆ.
ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ ಪತ್ನಿ ವಿಜಯಲಕ್ಷ್ಮಿ, ನಟ ಧನ್ವೀರ್ ಅವರೊಂದಿಗೆ ಕುಂಟುತ್ತಲೇ ಆಸ್ಪತ್ರೆಯೊಳಗೆ ತೆರಳಿದ ದರ್ಶನ್ ಗೆ ಮೊದಲು ಬಿಪಿ, ಶುಗರ್, ಇಸಿಜಿ, ಸ್ಕ್ಯಾನಿಂಗ್ ಸೇರಿ ಕೆಲವೊಂದು ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದಾರೆ. ವಿಐಪಿ ವಾರ್ಡ್ ನಲ್ಲಿ ಹಿರಿಯ ವೈದ್ಯ ಡಾ. ನವೀನ್ ದರ್ಶನ್ ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮೊದಲಿಗೆ ಫಿಜಿಯೋಥೆರಪಿ ಮತ್ತು ಔಷಧದಿಂದಲೇ ಬೆನ್ನು ನೋವು ಗುಣಪಡಿಸಲು ಕುಟುಂಬದವರು ಮನವಿ ಮಾಡಿದ್ದಾರೆ ಎನ್ನಲಾಗಿದೆ.