ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಸೇರಿರುವ ನಟ ದರ್ಶನ್ ಹಾಗೂ ಗ್ಯಾಂಗ್ ಬಳಿ ಇದ್ದ ಪಿಸ್ತೂಲ್ ಗಳನ್ನು ವಶಕ್ಕೆ ಪಡೆಯುವಂತೆ ತನಿಖಾಧಿಕಾರಿ ಪೊಲೀಸರಿಗೆ ಸೂಚಿಸಿದ್ದಾರೆ.
ನಟ ದರ್ಶನ್ ಹಾಗೂ ದರ್ಶನ್ ಆಪ್ತ ಪ್ರದೋಶ್ ಬಳಿ ಲೈಸನ್ಸ್ ಹೊಂದಿರುವ ಪಿಸ್ತೂಲುಗಳಿವೆ ಎಂಬುದು ಪೊಲೀಸರಿಗೆ ತನಿಖೆ ವೇಳೆ ಗೊತ್ತಾಗಿದೆ. ನಟ ದರ್ಶನ್ ಬಳಿ 2 ಯುಎಸ್ ಮೇಡ್ ಪಿಸ್ತೂಲ್ ಗಳಿದ್ದರೆ ಪ್ರದೋಶ್ ಬಳಿ ಒಂದು ಪಿಸ್ತೂಲ್ ಇದೆ.
ಲೋಕಸಭಾ ಚುನಾವಣೆ ವೇಳೆ ನಟ ದರ್ಶನ್ ಹಾಗೂ ಪ್ರದೋಶ್ ತಮ್ಮ ಬಳಿ ಇದ್ದ ಪಿಸ್ತೂಲ್ ನ್ನು ಪೊಲೀಸ್ ಠಾಣೆಗೆ ನೀಡಬೇಕಿತ್ತು. ಆದರೆ ದರ್ಶನ್ ಹಾಗೂ ಪ್ರದೋಶ್ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಪಡೆದು, ಪಿಸ್ತೂಲನ್ನು ಠಾಣೆಗೆ ಒಪ್ಪಿಸಿರಲಿಲ್ಲ ಎಂದು ತಿಳಿದುಬಂದಿದೆ.
ಇದೀಗ ನಟ ದರ್ಶನ್ ಹಾಗೂ ಗ್ಯಾಂಗ್ ಕೊಲೆ ಆರೋಪದಲ್ಲಿ ಜೈಲು ಸೇರಿದ್ದು, ಇದೀಗ ತನಿಖಾಧಿಕಾರಿ ನಟ ದರ್ಶನ್ ಹಾಗೂ ಪ್ರದೋಶ್ ಬಳಿ ಇರುವ ಪಿಸ್ತೂಲ್ ವಶಕ್ಕೆ ಪಡೆಯುವಂತೆ ಆರ್.ಆರ್.ನಗರ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.