ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಜೈಲೂಟವೇ ಗತಿಯಾಗಿದೆ. ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ನಟ ದರ್ಶನ್ ಪರ ವಕೀಲರು ವಾಪಸ್ ಪಡೆದುಕೊಂಡಿದ್ದಾರೆ. ತಾಂತ್ರಿಕ ಕಾರಣದಿಂದ ನಟ ದರ್ಶನ್ ಪರ ವಕೀಲರು ಹೈಕೋರ್ಟ್ ನಿಂದ ಅರ್ಜಿ ವಾಪಸ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಗೆ ಜೈಲಿನ ಊಟ ಒಗ್ಗೂಡುತ್ತಿಲ್ಲ. ಅಜೀರ್ಣ, ಅತಿಸಾರವಾಗುತ್ತಿದೆ. ಹೀಗಾಗಿ ಮನೆಯೂಟ ನೀಡಲು ಅವಕಾಶ ಕೊಡಬೇಕು ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಮನೆಯೂಟ, ಬಟ್ಟೆ, ಹಾಸಿಗೆ, ಪುಸ್ತಕ ನೀಡುವಂತೆ ಮನವಿ ಮಾಡಿದ್ದರು.
ಇತ್ತೀಚೆಗೆ ರಿಟ್ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್, ನಟ ದರ್ಶನ್ ರಿಟ್ ಅರ್ಜಿ ವಜಾಗೊಳಿಸಿತ್ತು. ಅಲ್ಲದೇ ದರ್ಶನ್ ಗೆ ಮನೆ ಊಟ ವ್ಯವಸ್ಥೆ ನೀಡಲು ಕೋರ್ಟ್ ನಿರಾಕರಿಸಿತ್ತು. ಕೊಲೆ ಆರೋಪಿಗಳಿಗೆ ಮನೆಯೂಟ, ಬಟ್ಟೆ, ಹಾಸಿಗೆ ನೀಡಲು ಅವಕಾಶವಿಲ್ಲ. ಜೈಲಿನಲ್ಲಿ ನೀಡುವ ಊಟವನ್ನೇ ಮಾಡಬೇಕು. ಜೈಲೂಟದಿಂದ ಅಂತಹ ಸಮಸ್ಯೆಯಾಗುವುದಿಲ್ಲ, ಆರೋಗ್ಯ ಸಮಸ್ಯೆಯಾದರೆ ಜೈಲಿನಲ್ಲಿಯೂ ವೈದ್ಯಾಧಿಕಾರಿಗಳಿರುತ್ತಾರೆ ಎಂದು ತಿಳಿಸಿತ್ತು.