ಸುದೀರ್ಘವಾಗಿ ವಾದ ಆಲಿಸಿದ ನ್ಯಾ ಎಸ್ ವಿಶ್ವಜಿತ್ ಅವರಿದ್ದ ಪೀಠ ಇಂದು ಸಂಜೆ 4 ಗಂಟೆಗೆ ಮುಂದೂಡಿದೆ. ಇಂದು ದರ್ಶನ್ ಗೆ ಬೇಲ್ ಆಗುತ್ತಾ..? ಅಥವಾ ಜಾಮೀನು ಅರ್ಜಿ ತಿರಸ್ಕಾರವಾಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.
ದರ್ಶನ್ ಪರ ಇಂದು ವಾದ ಮಂಡಿಸಿದ ಸಿವಿ ನಾಗೇಶ್ ರೇಣುಕಾಸ್ವಾಮಿ ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದನು. ರೇಣುಕಾಸ್ವಾಮಿಗೆ ಮಹಿಳೆಯರ ಬಗ್ಗೆ ಯಾವುದೇ ಗೌರವ ಇರಲಿಲ್ಲ. ಕಾನೂನಿನ ಬಗ್ಗೆ ಆತನಿಗೆ ಯಾವುದೇ ಗೌರವ ಇರಲಿಲ್ಲ ಎಂದು ವಾದ ಮಂಡಿಸಿದ್ದಾರೆ. ಜಡ್ಜ್ ಎದುರು ವಕೀಲ ಸಿವಿ ನಾಗೇಶ್ ರೇಣುಕಾಸ್ವಾಮಿ ಕಳುಹಿಸಿದ ಅಶ್ಲೀಲ ಸಂದೇಶಗಳನ್ನು ಓದಿ ತಿಳಿಸಿದ್ದಾರೆ.
ಬೆನ್ನು ನೋವು ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್, ಸರ್ಜರಿಗೆ ವೈದ್ಯರು ಸಲಹೆ ನೀಡಿದರೂ ಇನ್ನೂ ಸರ್ಜರಿಗೆ ಒಳಗಾಗಿಲ್ಲ. ಈ ನಡುವೆ ನಟ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಕೈಗೆತ್ತಿಕೊಂಡಿತ್ತು. ಈ ವೇಳೆ ಎಸ್ ಪಿಪಿ, ದರ್ಶನ್ ವೈದ್ಯಕೀಯ ವರದಿಯ ಪ್ರತಿ ನಮಗೆ ನೀಡಿಲ್ಲ ಎಂದು ತಿಳಿಸಿದ್ದರು.
ಇದೇ ವೇಳೆ ಪೊಲೀಸರು ಹೆಚ್ಚುವರಿ ಆರೋಪ ಪಟ್ಟಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಏಕಸದಸ್ಯ ಪೀಠ ಅರ್ಹತೆಯ ಮೇರೆಗೆ ಮುಂದಿನ ದಿನಾಂಕದಂದು ವಿಚಾರಣೆ ನಡೆಸಬಹುದು ಎಂದು ತಿಳಿಸಿದ್ದು, ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ನವೆಂಬರ್ 26ಕ್ಕೆ ನಿಗದಿಪಡಿಸಿ ಆದೇಶ ಹೊರಡಿಸಲಾಗಿತ್ತು.