ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ರನ್ನು ಬಂಧಿಸಲಾಗಿದ್ದು, ಇದೀಗ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ಒತ್ತಾಯಿಸಲಾಗಿದೆ.
ಬೇಡ ಜಂಗಮ ಸಮುದಾಯದ ಜಿಲ್ಲಾಧ್ಯಕ್ಷ ಎಂಟಿ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಹಲವರು ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ತನಿಖೆ ಮಾಡುವುದು ಬೇಡ, ದರ್ಶನ್ ಪ್ರಭಾವಿ ವ್ಯಕ್ತಿಯಾಗಿದ್ದು, ಈ ಕೇಸ್ ನಲ್ಲಿ ಅವರು ಹೊರಗೆ ಬರಬಹುದು. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ತನಿಖೆಗೆ ನೀಡಿ ಎಂದು ಆಗ್ರಹಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಪ್ರಕರಣ ಸಂಬಂಧ ನಟ ದರ್ಶನ್, ಪವಿತ್ರಗೌಡ ಸೇರಿ ಇದುವರೆಗೆ 13 ಆರೋಪಿಗಳನ್ನು ಬಂಧಿಸಲಾಗಿದೆ.ಬಂಧಿತ ಆರೋಪಿಗಳನ್ನು ಇಂದು ಸಂಜೆ ಕೋರ್ಟ್ ಗೆ ಹಾಜರುಪಡಿಸಲಾಗುತ್ತಿದ್ದು, ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡುವ ಸಾಧ್ಯತೆಯಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ ( ಕೊಲೆಯಾದ ವ್ಯಕ್ತಿ) ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ, ಫೋಟೋ ಕಳುಹಿಸಿದ್ದನು ಎನ್ನಲಾಗಿದೆ. ಪವಿತ್ರ ಗೌಡ ಕೂಡ ಈ ವಿಚಾರವನ್ನು ದರ್ಶನ್ ಗಮನಕ್ಕೆ ತಂದಿದ್ದರು ಎನ್ನಲಾಗಿದೆ. ನಂತರ ಯಾರೋ ಒಬ್ಬರು ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ರಾಘವೇಂದ್ರ ಎಂಬುವವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ನಂತರ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಕಾರ್ ಶೆಡ್ ಒಂದರಲ್ಲಿ ಹಲ್ಲೆ ನಡೆಸಲಾಗಿದೆ. ನಾಲ್ಕು ಮಂದಿ ರೇಣುಕಾ ಸ್ವಾಮಿಗೆ ಹಲ್ಲೆ ಮಾಡಿದ್ದು, ಈ ವೇಳೆ ನಟ ದರ್ಶನ್ ಕೂಡ ಸ್ಥಳದಲ್ಲಿದ್ದರು ಎನ್ನಲಾಗಿದೆ.