ಬೆಂಗಳೂರು: ಚಾಲೇಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಸಾಲು ಸಾಲು ದೂರು ದಾಖಲಾಗಿದೆ. ಎರಡು ದಿನಗಳಲ್ಲಿ ಒಟ್ಟು ನಾಲ್ಕು ಕೇಸ್ ದಾಖಲಾಗಿದೆ.
ದರ್ಶನ್ ಸಿನಿಮಾ ರಂಗಕ್ಕೆ ಕಾಲಿಟ್ಟು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಬೆಳ್ಳಿ ಸಂಭ್ರಮ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮಾತನಾಡುವಾಗ ನಟ ದರ್ಶನ್ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಹಿನ್ನೆಲೆಯಲ್ಲಿ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರನ್ನು ‘ಅಯ್ಯೋ ತಗಡೇ…’ ಎಂದು ನಿಂದಿಸಿದ ಕಾರಣಕ್ಕೆ ಮಹಿಳಾ ಒಕ್ಕೂಟ ಹಾಗೂ ಕೆಲ ಸಮುದಾಯದ ಮುಖಂಡರು ದರ್ಶನ್ ವಿರುದ್ಧ ದೂರು ದಾಖಲಿಸಿದ್ದಾರೆ.
ಗೌಡತಿಯ ಸೇನೆ ಫೆ.22ರಂದು ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿತ್ತು. ಇಂದು ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘದಿಂದ ದರ್ಶನ್ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ಹಿನ್ನೆಲೆಯಲ್ಲಿ ನಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.
ಈ ಬೆಳವಣಿಗೆ ಬೆನ್ನಲ್ಲೇ ಆರ್.ಆರ್.ನಗರ ಠಾಣೆಯಲ್ಲಿ ದರ್ಶನ್ ವಿರುದ್ಧ ಇಂದು ಮತ್ತೆರಡು ದೂರು ದಾಖಲಾಗಿದೆ. ವೇದಿಕೆ ಮೇಲೆ ಹೆಣ್ಣುಮಕ್ಕಳ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ಇದು ರಾಜ್ಯದ ಹಾಗೂ ದೇಶದ ಮಹಿಳಾ ಕುಲಕ್ಕೆ ಮಾಡಿದ ಅಪಮಾನ. ಅಲ್ಲದೇ ಪ್ರಭಾವಿ ಸಮುದಾಯದ ನಾಯಕರಿಗೆ ಅಪಮಾನ ಮಾಡಿದ್ದಾರೆ. ಸಮುದಾಯ ರೊಚ್ಚಿಗೇಳುವ ಮುನ್ನ ದರ್ಶನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗಣೇಶ್ ಗೌಡ ಹಾಗೂ ಜಗದೀಶ್ ಎಂಬುವವರು ದೂರು ದಾಖಲಿಸಿದ್ದಾರೆ.