ಮೈಸೂರು: ಗಂಡ, ಮಾವ ಹಾಗೂ ಬ್ಯಾಂಕ್ ಮ್ಯಾನೇಜರ್ ವಿರುದ್ಧ ನಟಿ ದೂರು ನೀಡಿದ್ದಾರೆ. ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಟಿ ಚೈತ್ರಾ ಬಿ. ಪೋತರಾಜ್ ಅವರು ತಮ್ಮ ಪತಿ ಬಾಲಾಜಿ ಮತ್ತು ಮಾವ ಪೋತರಾಜ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ನನಗೆ ಜೀವ ಬೆದರಿಕೆ ಇದೆ ಸೂಕ್ತ ರಕ್ಷಣೆ ಕೊಡಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಬ್ಯಾಂಕ್ ಖಾತೆಯನ್ನು ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಗಂಡ, ಮಾವನ ಷಡ್ಯಂತ್ರಕ್ಕೆ ಸಾಥ್ ನೀಡಿದ್ದಾರೆ ಎಂದು ಸೌತ್ ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ವಿರುದ್ಧ ದೂರು ನೀಡಲಾಗಿದೆ. ನನ್ನ ಖಾತೆಯ ಮೂಲಕ 13 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಅಡವಿಟ್ಟು ವಂಚಿಸಲಾಗಿದೆ. ಪತಿಯ ವಿರುದ್ಧ ಈಗಾಗಲೇ ದೈಹಿಕ ಹಲ್ಲೆ ಆರೋಪದಡಿ ಕೇಸು ದಾಖಲಿಸಿದ್ದು, ನನ್ನ ಬ್ಯಾಂಕ್ ಖಾತೆ ದುರ್ಬಳಕೆ ಮಾಡಿಕೊಂಡಿರುವುದು ಗೊತ್ತಾಗಿ ಮತ್ತೆ ದೂರು ನೀಡುತ್ತಿದ್ದೇನೆ ಎಂದು ಪೊಲೀಸ್ ದೂರಿನಲ್ಲಿ ನಟಿ ಚೈತ್ರಾ ಉಲ್ಲೇಖಿಸಿದ್ದಾರೆ. ಪತಿ, ಮಾವ, ಬ್ಯಾಂಕ್ ಮ್ಯಾನೇಜರ್ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಚೈತ್ರಾ ಅವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.