ಸಾಮಾಜಿಕ ಜಾಲತಾಣಗಳನ್ನೇ ಸುದ್ದಿಯ ಮೂಲವನ್ನಾಗಿ ನಂಬಿಕೊಂಡಿರುವ ಮಂದಿ ಸುಳ್ಳು/ಆಧಾರ ರಹಿತ ಸುದ್ದಿಗಳನ್ನು ನಂಬುವ ಸಾಧ್ಯತೆಗಳು ಬಹಳ ಇವೆ ಎಂದು ಅಮೆರಿಕದಲ್ಲಿ ನಡೆಸಲಾದ ಸಮೀಕ್ಷೆಯೊಂದು ವರದಿ ಮಾಡಿದೆ.
ದಿ ಪ್ಯೂ ರೀಸರ್ಚ್ ಕೇಂದ್ರದ ಈ ವರದಿಯಲ್ಲಿ; ರಾಜಕೀಯ, ಕೋವಿಡ್-19ನಂಥ ದೊಡ್ಡ ವಿಚಾರಗಳ ಬಗ್ಗೆಯೂ ಸಹ ಜನರಲ್ಲಿ ಸುಳ್ಳು ಸುದ್ದಿಗಳನ್ನು ಪಸರಿಸುವ ಕೆಲಸ ಎಗ್ಗಿಲ್ಲದೇ ಸಾಗುತ್ತಿದೆ ಎಂದು ತಿಳಿದು ಬಂದಿದೆ. ಡಿಜಿಟಲ್ ಯುಗದಲ್ಲಿ ಮುಖ್ಯವಾಹಿನಿ ಮಾಧ್ಯಮಗಳ ಹೋರಾಟದ ನಡುವೆಯೇ ಸಾಮಾಜಿಕ ಜಾಲತಾಣಗಳು ಆಳವಾಗಿ ಬೇರು ಬಿಟ್ಟ ಕಾರಣ ಈ ಮೂಲಕವೇ ಸುಳ್ಳು ಸುದ್ದಿಗಳು ಬಿತ್ತರಗೊಳ್ಳುತ್ತಿವೆ ಎಂದು ವರದಿಗಳು ತಿಳಿಸುತ್ತಿವೆ.
ಒಂದೇ ಒಂದು ‘ಟ್ವೀಟ್’ ನಿಂದಾಗಿ ಲಕ್ಷ ಕೋಟಿ ರೂಪಾಯಿ ನಷ್ಟ ಮಾಡಿಕೊಂಡ ವಿಶ್ವದ ಅತಿ ಸಿರಿವಂತ…!
ಸಮೀಕ್ಷೆಯಲ್ಲಿ ಪಾಲ್ಗೊಂಡ 18% ಮಂದಿ ರಾಜಕೀಯ ಹಾಗೂ ಚುನಾವಣೆ ಸಂಬಂಧಿತ ಸುದ್ದಿಗಳನ್ನೂ ಸಹ ಸಾಮಾಜಿಕ ಜಾಲತಾಣಗಳಲ್ಲೇ ತಿಳಿದುಕೊಂಡಿದ್ದಾಗಿ ತಿಳಿಸಿದ್ದಾರೆ. ಈ ಮಂದಿಗೆ ರಾಜಕೀಯ, ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತಂತೆ ಕೇಳಲಾದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಡಲು ಸಾಧ್ಯವಾಗಿಲ್ಲ.
ನವೆಂಬರ್ 2019ರಿಂದ ಡಿಸೆಂಬರ್ 2020ರ ನಡುವೆ 9000 ಮಂದಿಯ ಮೇಲೆ ಈ ಸಮೀಕ್ಷೆ ನಡೆಸಲಾಗಿದ್ದು, ಸಾಮಾಜಿಕ ಜಾಲತಾಣಗಳನ್ನು ಸುದ್ದಿ ಮೂಲಗಳನ್ನಾಗಿ ನಂಬಿಕೊಂಡ ಮಂದಿಗೆ ತಮ್ಮ ದೇಶದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಸರಿಯಾದ ಅರಿವೇ ಇಲ್ಲವೆಂದು ತಿಳಿದುಬಂದಿದೆ.