ಬೇಸಿಗೆ ರಜೆ ಮುಗಿದ ಬಳಿಕ ರಾಜ್ಯದಲ್ಲಿ ಈಗಾಗಲೇ ಶಾಲೆಗಳು ಆರಂಭವಾಗಿದ್ದು, ಮೊದಲ ದಿನದಂದು ಸರ್ಕಾರಿ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ ಸಿಹಿ ನೀಡುವ ಮೂಲಕ ಮಕ್ಕಳನ್ನು ಸ್ವಾಗತಿಸಲಾಗಿದೆ. ಕೆಲವೊಂದು ಖಾಸಗಿ ಶಾಲೆಗಳು ಸಹ ಆರಂಭವಾಗಿದ್ದು, ಇನ್ನುಳಿದವು ಜೂನ್ 1 ರಂದು ಪ್ರಾರಂಭವಾಗಲಿವೆ.
ಇದರ ಮಧ್ಯೆ ಕೆಲ ಖಾಸಗಿ ಶಾಲೆಗಳಲ್ಲಿ ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿರುವುದು, ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡದ ಕೆಲವೊಂದು ಪ್ರಕರಣಗಳು ಈ ಹಿಂದೆ ವರದಿಯಾಗಿದ್ದು, ಇದೀಗ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಈ ನಿಟ್ಟಿನಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿರುವ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಬಡ ಮಕ್ಕಳು, ಶುಲ್ಕ ಪಾವತಿಸದಿದ್ದರೆ ಶಿಕ್ಷಣ ಪಡೆಯಲು ಅಡ್ಡಿಪಡಿಸಲಾಗುತ್ತಿತ್ತು. ಆದರೆ ಶಿಕ್ಷಣ ಪ್ರಾಥಮಿಕ ಹಕ್ಕಾಗಿದ್ದು, ಶುಲ್ಕದ ನೆಪವೊಡ್ಡಿ ಯಾರಿಗೂ ಶಿಕ್ಷಣದ ಸೌಲಭ್ಯವನ್ನು ನಿರಾಕರಿಸುವಂತಿಲ್ಲ. ಶುಲ್ಕದ ಕಾರಣಕ್ಕೆ ಮಕ್ಕಳಿಗೆ ಶಿಕ್ಷಣ ನಿರಾಕರಿಸುವ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.