ಬೆಂಗಳೂರು : ‘ಕೊಡವ ಬುಡಕಟ್ಟು’ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಶಾಸಕ ಎ.ಎಸ್ ಪೊನ್ನಣ್ಣ ಅವರ ನೇತೃತ್ವದಲ್ಲಿ ಕೊಡವ ರಾಷ್ಟ್ರೀಯ ಮಂಡಳಿಯ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ‘ಕೊಡವ ಬುಡಕಟ್ಟು’ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮನವಿ ಸಲ್ಲಿಸಿದರು.
ಕೊಡವ ಬುಡಕಟ್ಟು ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಹಾಗೂ ಕೊಡಗರು ಎಂದು ನಮೂದಾಗಿರುವ ಕೊಡವ ಸಮುದಾಯದ ಹೆಸರನ್ನು ಕೊಡವ ಎಂದು ತಿದ್ದುಪಡಿ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಲು ಕೂಡ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಕೊಡವ ರಾಷ್ಟ್ರೀಯ ಮಂಡಳಿಯ ಎನ್.ಯು ನಾಚಪ್ಪ ಅವರ ನೇತೃತ್ವದ 30 ಜನರ ನಿಯೋಗ ಹಾಗೂ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ, ಕೆ.ಟಿ. ಪೆಮ್ಮಯ್ಯ, ಉಪಾಧ್ಯಕ್ಷರಾದ ಕರ್ನಲ್ ವಿವೇಕ್ ಮುತ್ತಣ್ಣ ಮತ್ತಿತರರು ನಿಯೋಗದ ಪರವಾಗಿ ಉಪಸ್ಥಿತರಿದ್ದರು.