ತುಮಕೂರು: ತುಮಕೂರು ಜಿಲ್ಲೆ ಪಾವಗಡದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಬಳಿಕ ಮೂವರು ಮಹಿಳೆಯರು ಮೃತಪಟ್ಟ ಹಿನ್ನೆಲೆಯಲ್ಲಿ ಇಬ್ಬರು ವೈದ್ಯರು ಸೇರಿ ಆರು ಮಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಫೆಬ್ರವರಿ 22ರಂದು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮತ್ತು ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿದ್ದು, 7 ಮಹಿಳೆಯರಿಗೆ ನೀಡಲಾಗಿದ್ದ ಚಿಕಿತ್ಸೆಯಲ್ಲಿ ಲೋಪ ಉಂಟಾಗಿ ಸೋಂಕು ಕಾಣಿಸಿಕೊಂಡು ಮೂರು ದಿನದಲ್ಲಿ ಮೂವರು ಮೃತಪಟ್ಟಿದ್ದರು. ಶಸ್ತ್ರ ಚಿಕಿತ್ಸೆ ವೇಳೆ ಕರ್ತವ್ಯ ಲೋಪ ಎಸಗಿರುವುದು ದೃಢಪಟ್ಟಿದ್ದು, ಸೋಂಕು ನಿವಾರಣೆ ಮತ್ತು ಸೋಂಕು ತಡೆಗೆ ಮುಂಜಾಗ್ರತೆ ವಹಿಸುವಲ್ಲಿ ಆಡಳಿತ ವೈದ್ಯಾಧಿಕಾರಿ, ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಡಿಹೆಚ್ಒ ಡಾ. ಮಂಜುನಾಥ್ ಎಂದು ತಿಳಿಸಿದ್ದಾರೆ.
ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಸೂತಿ ತಜ್ಞೆ ಡಾ. ಹೆಚ್.ಎಂ. ಪೂಜಾ, ಶುಶ್ರೂಷಾಧಿಕಾರೊ ಪದ್ಮಾವತಿ, ಒಟಿ ತಂತ್ರಜ್ಞ ಬಿ.ಆರ್. ಕಿರಣ್ ಅವರನ್ನು ವಜಾಗೊಳಿಸಲಾಗಿದೆ. ಆಸ್ಪತ್ರೆಯ ಕಾಯಂ ಶುಶ್ರೂಷಕಿ ನಾಗರತ್ನಮ್ಮ, ಮಾರಪ್ಪ ಅವರನ್ನು ಅಮಾನತುಗೊಳಿಸಲಾಗಿದೆ. ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ. ಕಿರಣ್ ಅವರಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ.