ಬೆಂಗಳೂರು :ರಾಜ್ಯ ಕಂಬಳ ಸಂಸ್ಥೆಗೆ ರಾಜ್ಯ ಕ್ರೀಡಾ ಸಂಸ್ಥೆಯ ಮಾನ್ಯತೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಬಿ.ನಾಗೇಂದ್ರ ಹೇಳಿದರು.ಕಂಬಳ ಕ್ರೀಡೆಯ ಸಾಧಕರಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ನೀಡಲಾಗುತ್ತಿದೆ, ಇದು 1 ಲಕ್ಷ ರೂ. ನಗದು ಪುರಸ್ಕಾರ ಒಳಗೊಂಡಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಸಚಿವರು ಕಂಬಳ ಕ್ರೀಡೆಯ ಸಾಧಕರಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ನೀಡುತ್ತಿದ್ದು, ಇದು 1 ಲಕ್ಷ ರೂ. ನಗದು ಪುರಸ್ಕಾರ ಒಳಗೊಂಡಿರುತ್ತದೆ. ಹಾಗೆಯೇ ಕಂಬಳವನ್ನೂ ಒಳಗೊಂಡಂತೆ ಕ್ರೀಡೆಗಳ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿರುವ ಸಂಸ್ಥೆಗಳಿಗೆ 5 ಲಕ್ಷ ನಗದು ಪುರಸ್ಕಾರದ ಕ್ರೀಡಾ ಪೋಷಕ ಪ್ರಶಸ್ತಿ ನೀಡಲಾಗುತ್ತಿದೆ. ಮೂಡುಬಿದರೆಯ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ 10 ಎಕರೆ ಜಾಗದಲ್ಲಿ ಕೋಟಿ ಚೆನ್ನಯ್ಯ ಹೆಸರಿನ ಜೋಡು ಕೆರೆಯನ್ನು ಕಂಬಳಕ್ಕಾಗಿ ನಿರ್ಮಿಸಲಾಗಿದೆ ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ತಿಳಿಸಿದ್ದಾರೆ.
ಅಲ್ಲದೇ, ಕಾರ್ಕಳ ತಾಲ್ಲೂಕಿನ ಮಿಯ್ಯಾರಿನಲ್ಲಿ 5 ಎಕರೆ ಪ್ರದೇಶದಲ್ಲಿ ಲವಕುಶ ಕಂಬಳ ಕ್ರೀಡಾಂಗಣ ನಿರ್ಮಿಸಲಾಗಿದೆ. ಅಲ್ಲಿ ನಡೆಯುವ ಕಂಬಳಕ್ಕೆ ಸರ್ಕಾರದ ವತಿಯಿಂದ ಅನುದಾನ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಕಂಬಳ ಸಂಸ್ಥೆ ರಚನೆಯಾಗಿ ಕರ್ನಾಟಕ ಕ್ರೀಡಾ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ, ಅದಕ್ಕೆ ರಾಜ್ಯ ಕ್ರೀಡಾ ಸಂಸ್ಥೆಯಾಗಿ ಮಾನ್ಯತೆ ನೀಡುವ ಬಗ್ಗೆ ಕ್ರಮ ವಹಿಸಲಾಗುವುದೆಂದು ಸಚಿವ ಬಿ.ನಾಗೇಂದ್ರ ತಿಳಿಸಿದ್ದಾರೆ.