ಬೆಂಗಳೂರು: ವಾಟ್ಸಾಪ್ ಗ್ರೂಪ್ ನಲ್ಲಿ ಮತ ಕೇಳಿದರೆ ಅಡ್ಮಿನ್ ಮೇಲೆ ಕ್ರಮ ಕೈಗೊಳ್ಳಲಾಗುವುದು. ಗೂಗಲ್ ಪೇ, ಫೋನ್ ಪೇ ಸೇರಿದಂತೆ ಇತರೆ ಅಕೌಂಟ್ ಗಳಿಂದ ಒಂದೇ ಖಾತೆಯಿಂದ ಅನೇಕರಿಗೆ ಪದೇ ಪದೇ ಹಣ ಪಾವತಿಸುವುದು ಕಂಡು ಬಂದಲ್ಲಿ ಕೇಸ್ ದಾಖಲಿಸಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವ ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಚುನಾವಣೆ ವಿಭಾಗದ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಎಚ್ಚರಿಕೆ ನೀಡಿದ್ದು, ಮತಯಾಚನೆಯ ಸಂದೇಶ ಬಂದರೆ ದೂರು ಕೊಡಿ ಎಂದು ತಿಳಿಸಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ವಿಧಾನಸಭೆ ಚುನಾವಣೆ ಅಂಗವಾಗಿ ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಮ್ಮಿಕೊಂಡ ಕಾರ್ಯಾಗಾರಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣ ಬಳಕೆದಾರರ ಮೇಲೆ ಚುನಾವಣಾ ಆಯೋಗ ವಿಶೇಷ ನಿಗಾ ವಹಿಸಿದೆ. ಹೆಚ್ಚು ಬಳಕೆಯಾಗುವ ವಾಟ್ಸಾಪ್ ಗ್ರೂಪ್ ಮತ್ತು ಟ್ರೋಲ್ ಪೇಜ್ ಗಳ ಮೇಲೆ ನಿಗಾವಹಿಸಿ ಅಡ್ಮಿನ್ ಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಅಭ್ಯರ್ಥಿಗಳ ಪರವಾಗಿ ಮತಯಾಚನೆ ಪ್ರಭಾವ ಬೀರುವ ಸಂದೇಶ ಬಂದಲ್ಲಿ ನೇರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಬಹುದು ಎಂದು ಹೇಳಿದ್ದಾರೆ.
ಇದಲ್ಲದೇ ಗೂಗಲ್ ಪೇ, ಫೋನ್ ಪೇ ಸೇರಿದಂತೆ ಇತರೆ ಅಕೌಂಟ್ ಗಳಿಂದ ಬೇರೆ ಖಾತೆಗಳಿಗೆ ಹಣ ಸಂದಾಯವಾದ ಬಗ್ಗೆ ಪ್ರಕರಣ ದಾಖಲಾದಲ್ಲಿ ತನಿಖೆ ನಡೆಸಲಾಗುವುದು. ಒಂದೇ ಖಾತೆಯಿಂದ ಸುಮಾರು 50ರಿಂದ 100 ಮಂದಿಗೆ ಪದೇಪದೇ ಹಣ ಪಾವತಿಸುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಜಾಹೀರಾತು ನೀಡುವ ರಾಜಕೀಯ ಪಕ್ಷ ಮತ್ತು ವ್ಯಕ್ತಿಗಳು ಪೂರ್ವ ಅನುಮತಿ ಪಡೆಯಬೇಕು. ಜಾಹೀರಾತುಗಳಲ್ಲಿ ವೈಯಕ್ತಿಕ ನಿಂದನೆ, ಜಾತಿ, ಧರ್ಮ ಸೂಚಿಸುವ ಯಾವುದೇ ಉಲ್ಲೇಖ ಇರಬಾರದು. ನಾಮಪತ್ರ ಸಲ್ಲಿಕೆ ಆರಂಭವಾದ ಮೇಲೆ ವೆಚ್ಚವನ್ನು ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.