ಬೆಂಗಳೂರು: ವಿಧಾನಪರಿಷತ್ ನಲ್ಲಿ ಮತಾಂತರ ನಿಷೇಧ ತಡೆ ಮಸೂದೆ ಮಂಡಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್.ಎಸ್.ಎಸ್. ಕಚೇರಿ ‘ಕೇಶವಕೃಪಾ’ದಲ್ಲಿ ಬಿಜೆಪಿ ವಿಧಾನಪರಿಷತ್ ಸದಸ್ಯರ ಸಭೆ ನಡೆಸಲಾಗಿದೆ.
ವಿಧೇಯಕ ಮಂಡನೆ ವೇಳೆ ಸಮರ್ಥಿಸಿಕೊಳ್ಳುವ ವಿಚಾರದ ಬಗ್ಗೆ ಚರ್ಚೆ ನಡೆಸಲಾಗಿದೆ. ಬಲವಂತದ ಮತಾಂತರ ನಿಷೇಧ ತಡೆ ಕಾಯ್ದೆ ಮಹತ್ವದ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ಕುರಿತಾಗಿ ಆರ್.ಎಸ್.ಎಸ್. ಪ್ರಮುಖರು ವಿಧಾನ ಪರಿಷತ್ ಬಿಜೆಪಿ ಸದಸ್ಯರಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ನಾರಾಯಣಸ್ವಾಮಿ, ಪರಿಷತ್ ಸದಸ್ಯರಾದ ಎನ್. ರವಿಕುಮಾರ್, ತುಳಸಿ ಮುನಿರಾಜುಗೌಡ, ಕೆ.ಎಸ್. ನವೀನ್, ಪ್ರತಾಪ ಸಿಂಹ ನಾಯಕ, ಎಂ.ಕೆ. ಪ್ರಾಣೇಶ್ ಮೊದಲಾದವರು ಭಾಗಿಯಾಗಿದ್ದರು. ವಿಧಾನ ಪರಿಷತ್ ನಲ್ಲಿ ಇಂದು ಪ್ರಶ್ನೋತ್ತರ ಕಲಾಪದ ನಂತರ ವಿಧೇಯಕ ಮಂಡನೆಯಾಗಲಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಮತಾಂತರ ನಿಷೇಧ ತಡೆ ವಿಧೇಯಕ ಮಂಡಿಸಲಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ ಮತಾಂತರ ನಿಷೇಧ ವಿಧೆಯಕ ಎಂದೇ ಹೇಳಲಾಗುವ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ವಿಧಾನಪರಿಷತ್ ನಲ್ಲಿ ಮಂಡಿಸಲಾಗುವುದು. ಸುಗ್ರೀವಾಜ್ಞೆಗೆ ಕಾಯ್ದೆಯ ಸ್ವರೂಪ ನೀಡಲಾಗುವುದು. ವಿಧಾನ ಪರಿಷತ್ ನಲ್ಲಿ ಬಿಜೆಪಿ ಬಹುಮತ ಹೊಂದಿರುವುದರಿಂದ ಸುಲಭವಾಗಿ ಒಪ್ಪಿಗೆ ಸಿಗಲಿದೆ.
ಬಲವಂತ, ಆಮಿಷ, ಮದುವೆಯಾಗುವ ಭರವಸೆ ನೀಡಿ ನಡೆಸುವ ಮತಾಂತರಕ್ಕೆ ನಿಷೇಧವಿದೆ.
ಮತಾಂತರಗೊಂಡ ವ್ಯಕ್ತಿಯ ಮನೆಯವರು, ಆಪ್ತರು ದೂರು ನೀಡಿದರೆ ಎಫ್ಐಆರ್ ದಾಖಲಿಸಲಾಗುವುದು.
ಬಲವಂತದ ಮತಾಂತರಕ್ಕೆ ಮೂರರಿಂದ ಐದು ವರ್ಷ ಜೈಲು ಶಿಕ್ಷೆ ಮತ್ತು 25,000 ರೂ.ವರೆಗೆ ದಂಡ ವಿಧಿಸಲಾಗುತ್ತದೆ.
ಮತಾಂತರವಾಗುವ ಮೊದಲು ವ್ಯಕ್ತಿ ಎರಡು ತಿಂಗಳು ಮುಂಚೆ ಜಿಲ್ಲಾಧಿಕಾರಿಗೆ ತಿಳಿಸಬೇಕು. ಈ ಮಾಹಿತಿಯನ್ನು ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು.
30 ದಿನಗಳ ಒಳಗೆ ಆಕ್ಷೇಪಣೆ ಬಂದರೆ ಕಂದಾಯ ಇಲಾಖೆ ವಿಚಾರಣೆ ನಡೆಸಬೇಕು.
ತಪ್ಪು ಕಂಡು ಬಂದಲ್ಲಿ ಕ್ರಿಮಿನಲ್ ಮುಖದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ.