
ಅದೊಂದು ಮಧ್ಯಪ್ರದೇಶದ ಪುಟ್ಟ ಕುಗ್ರಾಮ. ಆ ಕುಗ್ರಾಮದಲ್ಲಿದ್ದ ಆದಿವಾಸಿ ಕುಟುಂಬದ ಕನಸು ಮನೆಮಗ ಡಾಕ್ಟರ್ ಆಗಿ ನಾಲ್ಕು ಜನರಿಗೆ ಸಹಾಯ ಮಾಡಬೇಕು ಅಂತ. ಆದರೆ ಅವರು ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು. ಅದ್ಯಾರ ವಕ್ರದೃಷ್ಟಿ ಬಿತ್ತೋ ಏನೋ ಆ ಹುಡುಗ ಕೊಲೆ ಆರೋಪದ ಮೇಲೆ ಜೈಲಿಗೆ ಹೋಗಬೇಕಾಯಿತು.
ಅದು 13 ವರ್ಷದ ಹಿಂದೆ ನಡೆದ ಘಟನೆ. ಒಂದು ಕೊಲೆ ಆರೋಪದ ಮೇಲೆ ನನ್ನ ಮಗನನ್ನ ಜೈಲಿಗೆ ಹಾಕಿದರು. ಇದರಿಂದ ಆತ ತನ್ನ ಎಂಬಿಬಿಎಸ್ ವಿದ್ಯಾಭ್ಯಾಸವನ್ನ ಅರ್ಧಕ್ಕೆನೇ ನಿಲ್ಲಿಸುವಂತಾಯಿತು. ಇಲ್ಲವಾದಲ್ಲಿ ಆತ ಈ ಗ್ರಾಮದ ಮೊದಲ ಆದಿವಾಸಿ ವೈದ್ಯನಾಗಿರುತ್ತಿದ್ದ. ಹೀಗಂತ 69 ವರ್ಷದ ಜುಗ್ರಾಮ್ ಮಾರ್ಸ್ಕೊಲೆ ತಮಗಾದ ನೋವನ್ನ ಹೇಳಿಕೊಂಡಿದ್ದಾರೆ.
ಮಧ್ಯಪ್ರದೇಶ, ಬಾಲಾಘಾಟ್ ಜಿಲ್ಲೆಯಲ್ಲಿರೋ ವಾರಸಿಯೋನಿ ಡೋಕೆ ಎಂಬಲ್ಲಿ ನಡೆದ ಘಟನೆ ಇದು. ಇಲ್ಲಿರೋ ಆದಿವಾಸಿ ಜನಾಂಗದ ವ್ಯಕ್ತಿಯಾಗಿರೋ ಜುಗ್ರಾಮ್ ಅವರು ತಮ್ಮ ಮಗ ಚಂದ್ರೇಶ್ ಮಾರ್ಸ್‌ಕೂಲೆ ಡಾಕ್ಟರ್ ಆಗಬೇಕು ಅನ್ನೊ ಕನಸನ್ನ ಇಟ್ಟುಕೊಂಡಿದ್ದರು. ಆದರೆ ಮಗ ಜೈಲಿಗೆ ಹೋದ ನಂತರ ತಂದೆಯ ಆ ಕನಸು ಕನಸಾಗಿಯೇ ಉಳಿದಿತ್ತು. ಈಗ ಚಂದ್ರೇಶ್ ನಿರಪರಾಧಿ ಅಂತ ಉಚ್ಚನ್ಯಾಯಾಲಯ ಆರೋಪದಿಂದ ಮುಕ್ತಮಾಡಿದೆ.
ಇದೇ ತಿಂಗಳು 4ರಂದು ಉಚ್ಚನ್ಯಾಯಾಲಯ ತನ್ನ ತೀರ್ಪನ್ನ ನೀಡಿದೆ. ನ್ಯಾಯಮೂರ್ತಿಗಳಾದ ಅತುಲ್ ಶ್ರೀಧರನ್ ಹಾಗೂ ಸುನೀತಾ ಯಾದವ್ ಪೊಲೀಸ್ ಪ್ರಕರಣವನ್ನ ಸರಿಯಾಗಿ ತನಿಖೆ ಮಾಡದಿರುವುದಕ್ಕೆ ತರಾಟೆಗೆ ತೆಗೆದುಕೊಂಡಿದೆ. ಓರ್ವ ನಿರಪರಾಧಿಗೆ ಶಿಕ್ಷೆಗೆ ಒಳಪಡಿಸಿರೋದು ನಿಜಕ್ಕೂ ಖಂಡನೀಯ, ಇದು ಅಪರಾಧಿಗಳನ್ನ ಉದ್ದೇಶಪೂರಕವಾಗಿ ರಕ್ಷಿಸಿರೋ ಹಾಗಿದೆ ಅಂತ ಪೊಲೀಸರಿಗೆ ಖಡಕ್ ಆಗಿ ಹೇಳಿದೆ. ಅಷ್ಟೇ ಅಲ್ಲ ಚಂದ್ರೇಶ್ ಕುಟುಂಬಕ್ಕೆ 42 ಲಕ್ಷ ಪರಿಹಾರ ಕೊಡುವಂತೆ ಹೈಕೋರ್ಟ್, ಮಧ್ಯಪ್ರದೇಶ ಸರ್ಕಾರಕ್ಕೆ ಆದೇಶ ನೀಡಿದೆ.
2008 ಆಗ 23 ವರ್ಷದ ಚಂದ್ರೇಶ್ ಭೋಪಾಲ್ ಸರ್ಕಾರ ನಡೆಸುತ್ತಿದ್ದ ಗಾಂಧಿ ಮೆಡಿಕಲ್ ಕಾಲೇಜ್‌ನಲ್ಲಿ ಎಂಬಿಬಿಎಸ್ ಕೊನೆಯ ವರ್ಷದ ವಿದ್ಯಾರ್ಥಿಯಾಗಿದ್ದರು. ಅದೇ ಸಮಯದಲ್ಲಿ ಶೃತಿ ಅನ್ನೊ ಯುವತಿಯ ಹತ್ಯೆಯ ಆರೋಪದ ಮೇಲೆ ಬಂಧಿಸಲಾಗಿತ್ತು.
ಚಂದ್ರೇಶ್ ತಂದೆ ಜುಗ್ರಾಮ್ ಆ ಸಮಯದಲ್ಲಿ ಬಾಲಾಘಾಟ್ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕಷ್ಟಪಟ್ಟು ತಮ್ಮ ಮಗನಿಗೆ ಡಾಕ್ಟರ್ ಮಾಡುವ ಕನಸನ್ನ ಇಟ್ಟುಕೊಂಡಿದ್ದರು. ಆ ಕನಸು ಕೇವಲ ಅವರದ್ದೊಬ್ಬರದ್ದೇ ಆಗಿರಲಿಲ್ಲ, ಆ ಕುಟುಂಬದ ಪ್ರತಿ ಸದಸ್ಯರದ್ದು ಆಗಿತ್ತು. ಇನ್ನೇನು ಆ ಕನಸು ನನಸಾಗುತ್ತೆ, ಅನ್ನುವಷ್ಟರಲ್ಲೇ ಈ ಘಟನೆ ನಡೆದಿದೆ. ಆದರೂ ಚಂದ್ರೇಶ್ ತಂದೆ ಜುಗ್ರಾಮ್ ಅವರಿಗೆ ತಮ್ಮ ಮಗನನ್ನ ಡಾಕ್ಟರ್ ರೂಪದಲ್ಲಿ ನೋಡಬೇಕು ಅನ್ನೊ ಆಸೆ ಮಾತ್ರ ಇನ್ನೂ ಜೀವಂತವಾಗಿದೆ.