ನವದೆಹಲಿ: ಸಾರ್ವಜನಿಕ ಉದ್ದೇಶಗಳಿಗೆ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕೊಲ್ಕತ್ತಾ ಮಹಾನಗರ ಪಾಲಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ ಖಾಸಗಿ ಭೂಸ್ವಾಧೀನಕ್ಕೆ ಸರ್ಕಾರಗಳು 7 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶ ನೀಡಿದೆ.
ಸಾರ್ವಜನಿಕ ಉದ್ದೇಶದ ಹೆಸರಿನಲ್ಲಿ ಖಾಸಗಿಯವರ ಆಸ್ತಿ ಹಕ್ಕು ಮೊಟಕುಗೊಳಿಸಲಾಗದು. ಆಸ್ತಿಯ ಹಕ್ಕು ಸಾಂವಿಧಾನನಿಕ ಹಕ್ಕೂ ಆಗಿರುವುದರಿಂದ ಅದನ್ನು ಕಾನೂನು ರೀತಿಯಲ್ಲಿ ರಕ್ಷಿಸಬೇಕಿದೆ. ಈ ಹಕ್ಕನ್ನು ಮಾನವ ಹಕ್ಕು ಎಂದು ಕೂಡ ವಿಶ್ಲೇಷಿಸಬಹುದಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಜೆಗಳ ಹಕ್ಕನ್ನು ಆಲಿಸಬೇಕು ಅಥವಾ ಸ್ವಾಧೀನಕ್ಕೆ ಅವರು ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಗಣಿಸಬೇಕು. ನಂತರ ಪರಿಶೀಲಿಸಿ ಸ್ವಾಧೀನ ನಿರ್ಧಾರ ಕೈಗೊಳ್ಳಬೇಕು. ನಿರ್ಧಾರವನ್ನು ಸಂಬಂಧಿಸಿದ ವ್ಯಕ್ತಿಗೆ ತಿಳಿಸಬೇಕು. ಭೂಸ್ವಾಧೀನ ವಿಶೇಷವಾಗಿ ಸಾರ್ವಜನಿಕ ಉದ್ದೇಶದಿಂದ ಕೂಡಿದೆ ಎಂಬುದನ್ನು ಖಾಸಗಿ ವ್ಯಕ್ತಿಗೆ ಮನವರಿಕೆ ಮಾಡಿಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಭೂಮಿ ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು. ನಿರ್ದಿಷ್ಟ ಕಾಲಮಿತಿಯಲ್ಲಿ ಪ್ರಕ್ರಿಯೆಯನ್ನು ಪರಿಣಾಮಕಾರಿ ಮತ್ತು ಪಾರದರ್ಶಕವಾಗಿ ಕೈಗೊಳ್ಳುವುದು ಸರ್ಕಾರದ ಹೊಣೆಯಾಗಿದೆ. ಯಾವ ವ್ಯಕ್ತಿಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆಯೋ ಅಂತಹ ವ್ಯಕ್ತಿಗೆ ನೋಟಿಸ್ ನೀಡುವುದು ಸರ್ಕಾರದ ಮೊದಲನೇ ಕರ್ತವ್ಯ ಎಂದು 7 ಅಂಶಗಳ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶ ನೀಡಿದೆ.
ಸರಿಯಾದ ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ ಅದು ಅಸಂವಿಧಾನಿಕವಾಗುತ್ತದೆ. ವ್ಯಕ್ತಿಯ ಆಸ್ತಿಯ ಹಕ್ಕು ಕಸಿದುಕೊಂಡಂತಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕೊಲ್ಕತ್ತಾ ಮಹಾನಗರ ಪಾಲಿಕೆ ಖಾಸಗಿ ಸ್ವತ್ತಿನ ಭೂಸ್ವಾಧೀನ ಮಾಡಿಕೊಂಡಿದ್ದನ್ನು ಕೊಲ್ಕತ್ತಾ ಹೈಕೋರ್ಟ್ ಎತ್ತಿ ಹಿಡಿದಿರುವ ಆದೇಶವನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿ ಭೂ ಮಾಲೀಕರಿಗೆ 60 ದಿನದಲ್ಲಿ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಪಾಲಿಕೆಗೆ ಆದೇಶಿಸಿದೆ.