ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಳಿಯನೇ ಪತ್ನಿ ಕುಟುಂಬದ ಮೂವರನ್ನು ಕೊಲೆಗೈದ ದಾರುಣ ಘಟನೆ ರಾಯಚೂರು ಹೊರವಲಯದ ಯರಮರಸ ಎಂಬಲ್ಲಿ ನಡೆದಿದೆ.
ಮೃತರನ್ನು ಸಂತೋಷಿ (45), ವೈಷ್ಣವಿ(25) ಹಾಗೂ ಆರತಿ( 16) ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯ ವೇಳೆ ಈ ಕೊಲೆ ಅಳಿಯ ಸಾಯಿ ಎಂಬಾತನೇ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ವೈಷ್ಣವಿ ಹಾಗೂ ಸಾಯಿ ಆರು ತಿಂಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇವರ ವೈವಾಹಿಕ ಜೀವನವು ಸುಖಮಯವಾಗಿರಲಿಲ್ಲ.ಸಾಯಿ ಹಾಗೂ ವೈಷ್ಣವಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು ಎನ್ನಲಾಗಿದೆ.
ವೈಷ್ಣವಿ ತನ್ನ ತವರು ಮನೆಯಲ್ಲಿಯೇ ವಾಸವಿದ್ದಳು. ನಿನ್ನೆ ಅತ್ತೆ ಮನೆಗೆ ಬಂದಿದ್ದ ಸಾಯಿ ಮನೆಯವರ ಜೊತೆ ಜಗಳವಾಡಿದ್ದಾನೆ. ಮಾತ್ರವಲ್ಲದೇ ಮೂವರನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ರಾಯಚೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.