ಮಹಾರಾಷ್ಟ್ರದ ಥಾಣೆಯಲ್ಲಿ ತನ್ನ 11 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ ಆರೋಪಿ ರೈಲಿನ ಮುಂದೆ ಹಾರಿ ಕೆಲವೇ ಗಂಟೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಕ್ಟೋಬರ್ 26 ರಂದು ಆತನ ವಿರುದ್ಧ ಪ್ರಕರಣವನ್ನು ದಾಖಲಿಸಿದ ನಂತರ, ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ. ಅದೇ ದಿನ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ, 40 ವರ್ಷದ ಆಟೋರಿಕ್ಷಾ ಚಾಲಕ, ತನ್ನ ಮಗಳೊಂದಿಗೆ ಬದ್ಲಾಪುರದಲ್ಲಿ ವಾಸವಾಗಿದ್ದು, ಅವರ ಪತ್ನಿ ಕಳೆದ ಎರಡು ವರ್ಷಗಳಿಂದ ದುಬೈನಲ್ಲಿ ಉದ್ಯೋಗದಲ್ಲಿದ್ದರು ಎಂದು ಹಿರಿಯ ಇನ್ಸ್ ಪೆಕ್ಟರ್ ಅರುಣ್ ಕ್ಷೀರಸಾಗರ್ ತಿಳಿಸಿದ್ದಾರೆ.
ಆರೋಪಿಯು ಜುಲೈ 2022 ರಿಂದ ಈ ವರ್ಷದ ಅಕ್ಟೋಬರ್ ನಡುವೆ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿಯು ಇತ್ತೀಚೆಗೆ ತನ್ನ ಅಜ್ಜಿಗೆ ಘಟನೆಯ ಬಗ್ಗೆ ತಿಳಿಸಿದ ನಂತರ ಘಟನೆ ಮುಂಚೂಣಿಗೆ ಬಂದಿದೆ ಮತ್ತು ಕೆಲವು ದಿನಗಳ ಹಿಂದೆ ಮನೆಗೆ ಬಂದ ಬಾಲಕಿಯ ತಾಯಿಗೆ ಆಕೆ ತಿಳಿಸಿದ್ದಾಳೆ.
ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ದೂರು ದಾಖಲಿಸಿದ ನಂತರ ಓಡಿಹೋದ ವ್ಯಕ್ತಿಗಾಗಿ ಪೊಲೀಸರು ಶೋಧ ನಡೆಸಿದ್ದರು. ಅದೇ ದಿನ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.