ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡು ಹಾರಿಸಿದ ಪ್ರಕರಣದ ಆರೋಪಿಗಳಲ್ಲಿ ಒಬ್ಬ ಬುಧವಾರ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಆರೋಪಿಯನ್ನು 32 ವರ್ಷದ ಅನುಜ್ ಥಾಪನ್ ಎಂದು ಗುರುತಿಸಲಾಗಿದೆ. ಮುಂಬೈನಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡು ಹಾರಿಸಿದ ಇಬ್ಬರು ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ ಆರೋಪ ಈತನ ಮೇಲಿದೆ.
ಥಾಪನ್ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ನಂತರ ಅವರನ್ನು ಮುಂಬೈನ ಜಿಟಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರ ಸ್ಥಿತಿ ಗಂಭೀರವಾಗಿ ಸ್ವಲ್ಪ ಸಮಯದ ನಂತರ ಅವರು ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 25 ರಂದು ಪಂಜಾಬ್ ನಿಂದ ಮತ್ತೊಬ್ಬ ಆರೋಪಿ ಸೋನು ಸುಭಾಷ್ ಚಂದರ್(37) ಜೊತೆಗೆ ಥಾಪನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.
ಏಪ್ರಿಲ್ 14 ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಬೈಕ್ ನಲ್ಲಿ ಬಂದ ಇಬ್ಬರು ನಾಲ್ಕು ಸುತ್ತು ಗುಂಡು ಹಾರಿಸಿದ್ದರು.
ಘಟನೆಯ ನಂತರ, ಇಬ್ಬರು ಶೂಟರ್ ಗಳಾದ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಅವರನ್ನು ಗುಜರಾತ್‌ನ ಭುಜ್‌ನಿಂದ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಬಂಧಿತ ಶೂಟರ್‌ಗಳು ಮಾಹಿತಿ ನೀಡಿದ ನಂತರ ಥಾಪನ್ ಮತ್ತು ಚಂದರ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.