ಗುಜರಾತಿನ ಅಹ್ಮದಾಬಾದ್ ಸೈಬರ್ ಕ್ರೈಮ್ ಘಟಕವು ಭಾನುವಾರ ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಬಂಧನವು ಸಿಸಿ ಟಿವಿಗಳನ್ನು ಹ್ಯಾಕ್ ಮಾಡಿ ಮಹಿಳೆಯರ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಜಾಲವನ್ನು ಭೇದಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಬಂಧಿತ ಆರೋಪಿಗಳನ್ನು ಪರಿತ್ ಧಮೇಲಿಯಾ (35, ಬಿ.ಕಾಂ ಪದವೀಧರ), ರಯಾನ್ ಪೆರೇರಾ (24, ಬಿ.ಎಂ.ಎಸ್ ಪದವೀಧರ) ಮತ್ತು ವೈಭವ್ ಮಾನೆ (25, ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಪದವೀಧರ) ಎಂದು ಗುರುತಿಸಲಾಗಿದೆ. ದೆಹಲಿಯ ಮತ್ತೊಬ್ಬ ಆರೋಪಿ ರೋಹಿತ್ ಸಿಸೋಡಿಯಾ ಇನ್ನೂ ತಲೆಮರೆಸಿಕೊಂಡಿದ್ದಾನೆ. ಈ ಪ್ರಕರಣವು ರಾಜ್‌ಕೋಟ್‌ನ ಆಸ್ಪತ್ರೆಯ ಸ್ತ್ರೀರೋಗ ವಾರ್ಡ್‌ನಲ್ಲಿನ ಮಹಿಳೆಯರ ವಿಡಿಯೋಗಳು ಆನ್‌ಲೈನ್‌ನಲ್ಲಿ ಸೋರಿಕೆಯಾದ ನಂತರ ಬೆಳಕಿಗೆ ಬಂದಿತು.
ತನಿಖೆಯ ಪ್ರಕಾರ, ಆರೋಪಿಗಳು ಕಳೆದ ಒಂಬತ್ತು ತಿಂಗಳಲ್ಲಿ 50,000ಕ್ಕೂ ಹೆಚ್ಚು ವಿಡಿಯೋಗಳನ್ನು ಹ್ಯಾಕ್ ಮಾಡಿದ್ದಾರೆ. ವೈಭವ್ ಮತ್ತು ಪರಿತ್ ಅವರು ಅಸುರಕ್ಷಿತ ಸಿಸಿಟಿವಿ ನೆಟ್‌ವರ್ಕ್‌ಗಳ ಡ್ಯಾಶ್‌ಬೋರ್ಡ್‌ಗಳನ್ನು ಹ್ಯಾಕ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ಡಿಸಿಪಿ ಲವಿನಾ ಸಿನ್ಹಾ ತಿಳಿಸಿದ್ದಾರೆ. ಅವರು ಆಸ್ಪತ್ರೆಗಳು ಮಾತ್ರವಲ್ಲದೆ ಹೋಟೆಲ್‌ಗಳು, ಥಿಯೇಟರ್‌ಗಳು ಮತ್ತು ಖಾಸಗಿ ಮಲಗುವ ಕೋಣೆಗಳನ್ನೂ ಹ್ಯಾಕ್ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಎಸಿಪಿ ಹಾರ್ದಿಕ್ ಮಕಾಡಿಯಾ, ಪರಿತ್ ಮತ್ತು ವೈಭವ್ ವಿದೇಶಿ ಟೆಲಿಗ್ರಾಮ್ ಖಾತೆದಾರರಿಂದ ಹ್ಯಾಕಿಂಗ್ ತಂತ್ರಗಳನ್ನು ಕಲಿತಿದ್ದರು. ರಯಾನ್ ಈ ವಿಡಿಯೋಗಳನ್ನು ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದನು. ವಿಡಿಯೋಗಳನ್ನು ಫೋಲ್ಡರ್‌ಗಳಾಗಿ ವಿಂಗಡಿಸಿ, ವೀಕ್ಷಕರ ಬೇಡಿಕೆಯನುಸಾರ 800 ರಿಂದ 2,000 ರೂ.ಗಳವರೆಗೆ ಮಾರಾಟ ಮಾಡಲಾಗುತ್ತಿತ್ತು. ಮಲಗುವ ಕೋಣೆಯ ವಿಡಿಯೋಗಳಿಗೆ ಹೆಚ್ಚಿನ ಬೆಲೆ ನಿಗದಿಪಡಿಸಲಾಗಿತ್ತು.
ಆರೋಪಿಗಳು ಬ್ರೂಟ್ ಫೋರ್ಸ್ ಅಟ್ಯಾಕ್ ಬಳಸಿ ಸಿಸಿಟಿವಿ ಡ್ಯಾಶ್‌ಬೋರ್ಡ್‌ಗಳನ್ನು ಹ್ಯಾಕ್ ಮಾಡುತ್ತಿದ್ದರು. ಕ್ರಿಪ್ಟೋಕರೆನ್ಸಿ ಮೂಲಕ ಹಣ ಪಡೆಯುತ್ತಿದ್ದರು ಮತ್ತು ತಮ್ಮ ಗುರುತು ಮರೆಮಾಚಲು ವಿಪಿಎನ್ ಬಳಸುತ್ತಿದ್ದರು.
ಸಿಸಿಟಿವಿ ನೆಟ್‌ವರ್ಕ್‌ಗಳನ್ನು ಸುರಕ್ಷಿತಗೊಳಿಸಲು ಸಲಹೆಗಳು
- ಡೀಫಾಲ್ಟ್ ಪಾಸ್‌ವರ್ಡ್ ಬದಲಾಯಿಸಿ ಬಲವಾದ ಪಾಸ್‌ವರ್ಡ್ ಬಳಸಿ.
- ಎರಡು-ಅಂಶದ ದೃಢೀಕರಣ ಸಕ್ರಿಯಗೊಳಿಸಿ.
- ಅನಗತ್ಯ ಫೀಚರ್‌ಗಳನ್ನು ನಿಷ್ಕ್ರಿಯಗೊಳಿಸಿ.
- ಸಿಸಿ ಟಿವಿ ನೆಟ್‌ವರ್ಕ್ ಅನ್ನು ಪ್ರತ್ಯೇಕಿಸಿ ಮತ್ತು ಪ್ರವೇಶ ಮಿತಿಗೊಳಿಸಿ.
- ವಿಪಿಎನ್ ಬಳಸಿ.
- ಡೇಟಾ ಎನ್‌ಕ್ರಿಪ್ಟ್ ಮಾಡಿ ಮತ್ತು ಸುರಕ್ಷಿತ ಪ್ರೋಟೋಕಾಲ್‌ಗಳನ್ನು ಬಳಸಿ.
- ಫರ್ಮ್‌ವೇರ್ ಅನ್ನು ನಿಯಮಿತವಾಗಿ ನವೀಕರಿಸಿ.
- ಸಾಫ್ಟ್‌ವೇರ್ ಅನ್ನು ನವೀಕರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.
- ಎನ್‌ವಿಆರ್/ಡಿವಿಆರ್ ಅನ್ನು ಭೌತಿಕವಾಗಿ ಲಾಕ್ ಮಾಡಿಡಿ.
- ದೃಶ್ಯಾವಳಿಗಳ ಬ್ಯಾಕಪ್ ನಿರ್ವಹಿಸಿ.
- ಐಡಿಎಸ್ ಅನ್ನು ಸ್ಥಾಪಿಸಿ ಮತ್ತು ಸಿಸ್ಟಮ್ ಅನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
- ಸೈಬರ್ ಸೆಕ್ಯುರಿಟಿ ತಜ್ಞರ ಸಹಾಯದಿಂದ ನಿಯಮಿತ ಸಿಸ್ಟಮ್ ಆಡಿಟ್ ನಡೆಸಿ.