ಬೆಂಗಳೂರು: ಪೊಲೀಸ್ ಕಾನ್ ಸ್ಟೆಬಲ್ ಒಬ್ಬರು ತನ್ನ ಪ್ರಾಣವನ್ನೇ ಒತ್ತಿ ಇಟ್ಟು ಆರೋಪಿಯನ್ನು ಹಿಡಿದ ಘಟನೆ ಬೆಂಗಳೂರು ಸದಾಶಿವನಗರ ಸಂಚಾರ ಪೊಲೀಸ್ ಠಾಣೆ ಎದುರು ನಡೆದಿದೆ.
ತುಮಕೂರು ಜಿಲ್ಲೆ ಕೊರಟಗೆರೆ ಠಾಣೆ ಕಾನ್ ಸ್ಟೆಬಲ್ ದೊಡ್ಡಲಿಂಗಯ್ಯ ಅವರ ಸಾಹಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬೆಂಗಳೂರಿನ ಸದಾಶಿವನಗರ ಟ್ರಾಫಿಕ್ ಠಾಣೆಯ ಮುಂಭಾಗ ದೊಡ್ಡಲಿಂಗಯ್ಯ ಸಾಹಸ ಮೆರೆದು ಆರೋಪಿಯನ್ನು ಹಿಡಿದಿದ್ದಾರೆ.
ಮಂಜುನಾಥ್ ಅಲಿಯಾಸ್ ಹೊಟ್ಟೆಮಂಜ ಬಂಧಿತ ಆರೋಪಿಯಾಗಿದ್ದಾನೆ. 7 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಹೊಟ್ಟೆಮಂಜ ವೃದ್ಧೆಯರಿಗೆ ಪಿಂಚಣಿ ಮಾಡಿಕೊಡುವ ಹೆಸರಲ್ಲಿ ವಂಚಿಸಿದ್ದ. ಸತತ ಒಂದು ತಿಂಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಕೊರಟಗೆರೆಯಿಂದ ಬೆಂಗಳೂರಿನವರೆಗೆ ಸಿಸಿಟಿವಿಗಳನ್ನು ಪರಿಶೀಲಿಸಲಾಗಿದೆ.
ಸದಾಶಿವನಗರ ಠಾಣೆ ರಸ್ತೆ ಬಳಿ ಮಂಜ ಬಂದಿದ್ದು, ಈ ವೇಳೆ ಆರೋಪಿಯನ್ನು ಹಿಡಿಯಲು ಮುಂದಾದ ದೊಡ್ಡಲಿಂಗಯ್ಯ ಬೈಕ್ ಅನ್ನು ಹಿಡಿದುಕೊಂಡಿದ್ದಾರೆ. ಆದರೆ, ಬೈಕ್ ನಲ್ಲಿ ಪರಾರಿಯಾಗಲು ಯತ್ನಿಸಿದ್ದು, ದೊಡ್ಡಲಿಂಗಯ್ಯ ಬೈಕ್ ಹಾಗೂ ಆರೋಪಿ ಕಾಲು ಹಿಡಿದುಕೊಂಡಿದ್ದಾರೆ. ಸ್ವಲ್ಪ ದೂರ ಎಳೆದುಕೊಂಡು ಎಸ್ಕೇಪ್ ಆಗಲು ಮಂಜ ಯತ್ನಿಸಿದ್ದು, ಪಟ್ಟುಬಿಡದೆ ತನ್ನ ಪ್ರಾಣವನ್ನು ಲೆಕ್ಕಿಸದೆ ಬಿಗಿಯಾಗಿ ಹಿಡಿದು ಬೈಕ್ ನಿಲ್ಲಿಸಿದ್ದಾರೆ.
ಸ್ಥಳದಲ್ಲಿದ್ದ ಟ್ರಾಫಿಕ್ ಸಿಬ್ಬಂದಿ, ಸ್ಥಳೀಯರ ಸಹಾಯದಿಂದ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೊಡ್ಡಲಿಂಗಯ್ಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮೈಮೇಲೆ ಚಿನ್ನವಿದ್ದರೆ ಪಿಂಚಣಿ ಮಾಡಿಕೊಡುವುದಿಲ್ಲ. ಚಿನ್ನ ಬಿಚ್ಚಿ ಕೊಡಿ ಎಂದು ಹೇಳುತ್ತಿದ್ದ ಹೊಟ್ಟೆಮಂಜ ಬಳಿಕ ಪಿಂಚಣಿ ಅರ್ಜಿ ತರುವ ನೆಪದಲ್ಲಿ ಚಿನ್ನದ ಸಮೇತ ಎಸ್ಕೇಪ್ ಆಗುತ್ತಿದ್ದ.
ಒಟ್ಟು 7 ಕೇಸುಗಳಲ್ಲಿ ಮಂಜುನಾಥ್ ಅಲಿಯಾಸ್ ಹೊಟ್ಟೆ ಮಂಜ ಬೇಕಾಗಿದ್ದ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ 4, ಕೋಳಾಲ ಪೊಲೀಸ್ ಠಾಣೆ, ಮಧುಗಿರಿ ಠಾಣೆ, ಹೆಬ್ಬೂರು ಠಾಣೆಯಲ್ಲಿ ತಲಾ ಒಂದು ಕೇಸ್ ನಲ್ಲಿ ಆರೋಪಿ ಬೇಕಾಗಿದ್ದ. ಕೊರಟಗೆರೆ ಸಿಪಿಐ ಅನಿಲ್, ಪಿಎಸ್ಐ ಚೇತನ್ ನೇತೃತ್ವದಲ್ಲಿ ಬಂಧಿಸಲಾಗಿದೆ.