
ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಕೆಆರ್ ಸರ್ಕಲ್ ಬಳಿ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಟಿಸಿಎಸ್ ನಲ್ಲಿ ಕೆಲಸ ಮಾಡುತ್ತಿದ್ದ ಬಾಣಸವಾಡಿಯ ಪ್ರಶಾಂತ್, ಆಂಧ್ರ ಪ್ರದೇಶದ ಶಿಲ್ಪಾ ಮೃತಪಟ್ಟವರು. ಅಪಘಾತದ ಬಳಿಕ ಬಿಬಿಎಂಪಿ ಕಸದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಅತಿ ವೇಗವಾಗಿ ಬಂದ ಕಸದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಸವಾರರು ಕೆಳಗೆ ಬಿದ್ದಿದ್ದು, ಈ ವೇಳೆ ಇಬ್ಬರ ಮೇಲೆಯೂ ಬಿಬಿಎಂಪಿ ಕಸದ ಲಾರಿ ಹರಿದಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಲಾರಿ ಚಾಲಕನ ನಿರ್ಲಕ್ಷ್ಯ, ಅತಿ ವೇಗವೇ ಅಪಘಾತಕ್ಕೆ ಕಾರಣವಾಗಿದೆ ಎಂದು ಮಗ ಪ್ರಶಾಂತ್ ಕಳೆದುಕೊಂಡ ತಂದೆ ಲೋಕೇಶ್ ಕಣ್ಣೀರಿಟ್ಟಿದ್ದಾರೆ. ಕಸದ ವಾಹನ ಡಿಕ್ಕಿಯಾಗಿ ನನ್ನ ಮಗ, ಯುವತಿ ಮೃತಪಟ್ಟಿದ್ದಾರೆ. ಇಬ್ಬರೂ ಟಿಸಿಎಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಪಘಾತ ಎಸಗಿದ ಲಾರಿ ಚಾಲಕನನ್ನು ಕೂಡಲೇ ಬಂಧಿಸಬೇಕು. ನಮಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ನಾನು, ನನ್ನ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಪೊಲೀಸರ ಬಳಿ ಮುರಿದ ಪ್ರಶಾಂತ್ ತಂದೆ ಕಣ್ಣೀರಿಟ್ಟಿದ್ದಾರೆ.
ಬೆಂಗಳೂರಿನ ಸೇಂಟ್ ಮಾರ್ಥಾಸ್ ಆಸ್ಪತ್ರೆ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಗ ಪ್ರಶಾಂತನನ್ನು ಕಳೆದುಕೊಂಡು ಪೋಷಕರು ಕಣ್ಣೀರಿಟ್ಟಿದ್ದಾರೆ. ಮೊಮ್ಮಗನ ಸಾವಿನ ವಿಚಾರ ತಿಳಿದ ಅಜ್ಜಿ ಕುಸಿದು ಬಿದ್ದಿದ್ದಾರೆ. ಇಡೀ ರಾತ್ರಿ ಆಸ್ಪತ್ರೆಯ ಮುಂಭಾಗ ಕುಟುಂಬದವರು ಕಣ್ಣೀರಿಟ್ಟಿದ್ದಾರೆ.