ಮಂಗಳೂರು: ರಸ್ತೆ ಅಪಘಾತದಲ್ಲಿ ವ್ಯಕ್ತಿಯೋಬ್ಬರು ಗಂಭೀರವಾಗಿ ಗಾಯಗೊಂಡು ನರಳಾಡುತ್ತಿರುವುದನ್ನು ಕಂಡ ಲೇಡಿ ಕಾನ್ಸ್ ಟೇಬಲ್ ಓರ್ವರು ತಮ್ಮದೇ ಸ್ಕೂಟರ್ ನಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಬೆಳಗಿನ ಜಾವ 4 ಗಂಟೆ ಸುಮಾರಿಗೆ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿದ್ದರು. ಮಂಗಳೂರಿನ ಕೆಪಿಟಿ ಬಳಿಯ ವ್ಯಾಸನಗರದ ತಿರುವಿನಲ್ಲಿ ಈ ಘಟನೆ ನಡೆದಿತ್ತು. ಕರ್ತವ್ಯಕ್ಕೆ ತೆರಳುತ್ತಿದ ಕದ್ರಿ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ ಟೇಬಲ್ ಮುರ್ಶಿದಾ ಬಾನು ಇದನ್ನು ಗಮನಿಸಿ, ತಮ್ಮದೇ ಸ್ಕೂಟರ್ ನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಳಗಿನ ಜಾವ 4ಗಂಟೆ ಸುಮಾರಿಗೆ ಟ್ರಕ್ ಹಾಗೂ ಕೋಳಿ ಸಾಗಾಟದ ಪಿಕಪ್ ವಾಹನಗಳ ನಡುವೆ ಅಪಘಾತ ಸಂಭವಿಸಿತ್ತು. ಟ್ರಕ್ ಕ್ಲೀನರ್ ಮುಖ, ಕೈ-ಕಾಲುಗಳಿಗೆ ಗಂಭೀರವಾದ ಗಾಯಗಳಾಗಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು ಯಾವುದೇ ವಾಹನಗಳು ಸಿಗುತ್ತಿರಲಿಲ್ಲ. ಈ ವೇಳೆ ಅದೇ ಮಾರ್ಗವಾಗಿ ತೆರಳುತ್ತಿದ್ದ ಕದ್ರಿ ಠಾಣೆ ಮಹಿಳಾ ಕಾನ್ಸ್ ಟೇಬಲ್ ಮುರ್ಶಿದಾ ಬಾನು, ಇನ್ನೋರ್ವ ಪೊಲೀಸ್ ಸಹಾಯದೊಂದಿಗೆ ತಮ್ಮದೇ ಸ್ಕೂಟರ್ ನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಮಹಿಳಾ ಕಾನ್ಸ್ ಟೇಬಲ್ ಸಮಯ ಪ್ರಜ್ಞೆ ಹಾಗೂ ಮಾನವೀಯತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.