ಬೆಂಗಳೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎಸ್.ಹೆಚ್. ಲಿಂಗೇಗೌಡ ಹಾಗೂ ಸದಸ್ಯ ಮೂಸಾ ಷರೀಫ್ ಅವರು ಗುಜರಾತ್ ನ ಭರೂಚ್ ನಲ್ಲಿ ಪಾದಯಾತ್ರೆ ವೇಳೆ ಸಂಭವಿಸಿದ ಅಪಘಾತದಲ್ಲಿ ಸಾವನ್ನುಪ್ಪಿದ್ದಾರೆ.
ಅತ್ಯಾಚಾರ ಪ್ರಕರಣಗಳಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕಠಿಣ ಕಾನೂನು ಕ್ರಮ, ಶೀಘ್ರ ವಿಚಾರಣೆ, ಗರಿಷ್ಟ ಶಿಕ್ಷೆ ಖಾತರಿಗೆ ಒತ್ತಾಯಿಸಿ ರಾಷ್ಟ್ರಪತಿ ಮತ್ತು ಪ್ರಧಾನಿಯವರಿಗೆ ನೇರವಾಗಿ ಮನವಿ ಸಲ್ಲಿಸಲು ಮಂಗಳೂರಿನ ಸಾಹಸಿಗಳೊಂದಿಗೆ ಮಂಗಳೂರಿನಿಂದ ದೆಹಲಿಗೆ ಪಾದಯಾತ್ರೆ ಕೈಗೊಂಡಿದ್ದರು.
ಸೂರತ್ ಸಮೀಪದ ಭರೂಚ್ ನಗರದ ಬಳಿ ಹೆದ್ದಾರಿ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಲಿಂಗೇಗೌಡ ಮತ್ತು ಮಂಗಳೂರಿನ ಮೂಸಾ ಷರೀಫ್ ಮತ್ತು ಇತರ ಪಾದಯಾತ್ರೆಗಳ ಮೇಲೆ ಲಾರಿ ಹರಿದಿದೆ.
ಬುಧವಾರ 55ನೇ ದಿನದ ಪಾದಯಾತ್ರೆ ಭರೂಚ್ ತಲುಪಿತ್ತು. ಪಾದಯಾತ್ರೆ ತಂಡಕ್ಕೆ ನೈತಿಕ ಬೆಂಬಲ ನೀಡಲು ಲಿಂಗೇಗೌಡ ಗುಜರಾತ್ ಗೆ ತೆರಳಿದ್ದರು. ಹೆದ್ದಾರಿ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಯಾತ್ರಿಗಳ ಮೇಲೆ ಲಾರಿ ಹರಿದು ಲಿಂಗೇಗೌಡ ಮತ್ತು ಮಂಗಳೂರಿನ ಮೂಸಾ ಷರೀಫ್ ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಂಪುರ ಗ್ರಾಮದ ಲಿಂಗೇಗೌಡ ಎಂಎ ಪದವೀಧರರಾಗಿದ್ದು, ಅಬಕಾರಿ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದ್ದರು. ಭ್ರಷ್ಟ ವ್ಯವಸ್ಥೆಯಿಂದ ಬೇಸತ್ತು ಹುದ್ದೆಗೆ ರಾಜೀನಾಮೆ ನೀಡಿದ್ದು, ಭಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕಾಗಿ 2018ರಲ್ಲಿ ಸ್ವರಾಜ್ ಇಂಡಿಯಾ ಪಕ್ಷದಿಂದ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು.