ಹಾಸನ: ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಅಮಾನವೀಯ ಘಟನೆ ನಡೆದಿದೆ. ಅಕ್ರಮವಾಗಿ ಕರುಗಳನ್ನು ಸಾಗಿಸುತ್ತಿದ್ದ ವೇಳೆ ಅಪಘಾತ ಉಂಟಾಗಿದ್ದು, ವಾಹನದಲ್ಲಿದ್ದ 50 ಕರುಗಳು ದಾರುಣವಾಗಿ ಮೃತಪಟ್ಟಿವೆ.
ಬೇಲೂರು ತಾಲ್ಲೂಕಿನ ದ್ಯಾವಪ್ಪನಹಳ್ಳಿ ಸಮೀಪ ಗೂಡ್ಸ್ ವಾಹನದಲ್ಲಿ ನೂರಕ್ಕೂ ಹೆಚ್ಚು ಕರುಗಳನ್ನು ಸಾಗಿಸಲಾಗುತಿತ್ತು. ಬಾಯಿ ಮತ್ತು ಕಾಲುಗಳಿಗೆ ಹಗ್ಗ ಕಟ್ಟಿ ಅಮಾನವೀಯವಾಗಿ ಸಾಗಾಟ ಮಾಡಲಾಗುತ್ತಿತ್ತು. ಗೋಹತ್ಯೆ ನಿಷೇಧ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಕರುಗಳನ್ನು ಸಾಗಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಅದರಲ್ಲಿದ್ದ 50 ಕ್ಕೂ ಹೆಚ್ಚು ಕರುಗಳು ಸಾವನ್ನಪ್ಪಿವೆ.
ಕೆಲವು ಕರುಗಳು ಉಸಿರುಗಟ್ಟಿ ವಾಹನದಲ್ಲಿಯೇ ಮೃತಪಟ್ಟಿದ್ದು, ಅಪಘಾತದ ವೇಳೆ ಮತ್ತೆ ಕೆಲವು ಕರುಗಳು ಮೃತಪಟ್ಟಿರುವುದಾಗಿ ಹೇಳಲಾಗಿದೆ. ಅಪಘಾತದ ಸ್ಥಳಕ್ಕೆ ತೆರಳಿದ ಬೇಲೂರು ಶಾಸಕ ಲಿಂಗೇಶ್ ಕರುಗಳನ್ನು ರಕ್ಷಿಸಿದ್ದು, ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.