ಶಿವಮೊಗ್ಗ: ಗದಗ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಶಿವಮೊಗ್ಗ ಒಂದನೇ ಸೆಷನ್ಸ್ ಕೋರ್ಟ್ ಜಡ್ಜ್ ನ್ಯಾಯಮೂರ್ತಿ ಕೆ.ಎಸ್. ಮನು ಅವರು ನ್ಯಾಯಾಂಗ ಬಂಧನಕ್ಕೆ ವಹಿಸಿ ಆದೇಶಿಸಿದ್ದಾರೆ. ನಾಳೆ ಜಾಮೀನು ಅರ್ಜಿ ವಿಚಾರಣೆಗೆ ನ್ಯಾಯಾಧೀಶರು ಅವಕಾಶ ನೀಡಿದ್ದಾರೆ.
ನಿನ್ನೆ ರುದ್ರೇಶಪ್ಪ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಅಪಾರ ಪ್ರಮಾಣದ ಅಕ್ರಮ ಸಂಪತ್ತು ಪತ್ತೆ ಮಾಡಿದ್ದರು. ಅವರ ಆದಾಯಕ್ಕೂ ಆಸ್ತಿಗೂ ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ. ಆದಾಯ ಮೀರಿ ಅಪಾರ ಪ್ರಮಾಣದ ಆಸ್ತಿಯನ್ನು ಗಳಿಸಿರುವುದು ದಾಳಿಯ ವೇಳೆ ಗೊತ್ತಾಗಿದೆ.
ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಬಳಿ ಶೇಕಡ 406 ರಷ್ಟು ಅಕ್ರಮ ಆಸ್ತಿ ಪತ್ತೆಯಾಗಿದೆ. ತಲಾ 100 ಗ್ರಾಂನ 50 ಚಿನ್ನದ ಬಿಸ್ಕೆಟ್, ಚಿನ್ನಾಭರಣ ಸೇರಿ 7.5 ಕೆಜಿ ಚಿನ್ನ, ವಜ್ರದ ಹಾರಗಳು, 3 ಕೆಜಿ ಬೆಳ್ಳಿ, 15 ಲಕ್ಷ ರೂ.ನಗದು, 2 ಕಾರ್, 2 ಮನೆ, 4 ನಿವೇಶನ, 8 ಎಕರೆ ಜಮೀನು, 3 ದ್ವಿಚಕ್ರವಾಹನ ಹೊಂದಿದ್ದಾರೆನ್ನಲಾಗಿದೆ.