ಬಾಗಲಕೋಟೆ: 10 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕರೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ನಗರಸಭೆಯ ದ್ವಿತೀಯ ದರ್ಜೆ ಸಹಾಯಕ ಸದಾಶಿವಯ್ಯ ಎಸಿಬಿ ಬಲೆಗೆ ಬಿದ್ದವರು. ಬಾಗಲಕೋಟೆ ಜಿಲ್ಲೆ ಮುಧೋಳ ನಗರಸಭೆ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಅವರು ಬಲೆಗೆ ಬಿದ್ದಿದ್ದಾರೆ.
ಮನೆ ಕಟ್ಟಡ ಮುಕ್ತಾಯ ಪ್ರಮಾಣಪತ್ರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಗೀತಾ ಎಂಬುವರು ಮನೆ ಕಟ್ಟಿಸಿದ್ದು, ಪ್ರಮಾಣ ಪತ್ರ ನೀಡುವಂತೆ ಗೀತಾ ಅವರ ಪುತ್ರ ಕೋರಿದ್ದರು. ಇದಕ್ಕಾಗಿ 15,000 ರೂ. ಲಂಚಕ್ಕೆ ಎಸ್.ಡಿ.ಎ. ಸದಾಶಿವಯ್ಯ ಕತ್ತಿ ಬೇಡಿಕೆ ಇಟ್ಟಿದ್ದರು. ಈ ಮೊದಲು 5 ಸಾವಿರ ರೂಪಾಯಿ ಲಂಚ ಸ್ವೀಕರಿಸಿದ್ದ ಅವರು ಇಂದು 10,000 ರೂ. ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮಂಜುನಾಥ ಅವರಿಂದ ಲಂಚ ಪಡೆಯುವಾಗ ಎಸಿಬಿ ಡಿವೈಎಸ್ಪಿ ಸುರೇಶ್ ರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎನ್ನಲಾಗಿದೆ.