ಬೆಂಗಳೂರು: ರಜೆ ಪಡೆಯದೆ ಕೆಲಸಕ್ಕೆ ಗೈರುಹಾಜರಾಗುವುದು ದುರ್ನಡತೆಯಾಗುತ್ತದೆ. ಶಿಸ್ತುಕ್ರಮ ಜರುಗಿಸಲು ಅರ್ಹವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ. ಉದ್ಯೋಗಿಯ ಅನಧಿಕೃತ ರಜೆಯನ್ನು ಕಾರ್ಮಿಕ ನ್ಯಾಯಾಲಯಗಳು ಲಘುವಾಗಿ ಪರಿಗಣಿಸಬಾರದು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಅನಧಿಕೃತವಾಗಿ ಉದ್ಯೋಗಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಚಾಲಕ ಕಂ ನಿರ್ವಾಹಕರೊಬ್ಬರನ್ನು ಸೇವೆಯಿಂದ ವಜಾಗೊಳಿಸಿದ ಬಿಎಂಟಿಸಿ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಅನಧಿಕೃತವಾಗಿ ಕೆಲಸಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಚಾಲಕ ಕಂ ನಿರ್ವಾಹಕ ಹುದ್ದೆಯಿಂದ ರಾಯಚೂರಿನ ಟಿ. ದೇವಪ್ಪ ಅವರನ್ನು ವಜಾಗೊಳಿಸಿದ್ದ ತನ್ನ ಕ್ರಮವನ್ನು ರದ್ದುಪಡಿಸಿದ ಕಾರ್ಮಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಿಎಂಟಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು, ಈ ಮೇಲ್ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿದೆ.
ಈ ಪ್ರಕರಣದಲ್ಲಿ ರಜೆ ಕೋರಿ ಅರ್ಜಿ ಸಲ್ಲಿಸದೆ ಮತ್ತು ಉನ್ನತ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಕೆಲಸಕ್ಕೆ ಗೈರುಹಾಜರಾಗಿದ್ದರೂ ದೇವಪ್ಪನನ್ನು ಸೇವೆಗೆ ಮರು ನಿಯೋಜಿಸಲು ಬಿಎಂಟಿಸಿಗೆ ನಿರ್ದೇಶಿಸಿದ ಕಾರ್ಮಿಕ ನ್ಯಾಯಾಲಯದ ಆದೇಶ ದೋಷಪೂರಿತವಾಗಿದೆ ಎಂದು ಹೈಕೋರ್ಟ್ ಹೇಳಿದೆ.