ಮುಂಬೈ: 1992ರಲ್ಲಿ ಮುಂಬೈನಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ತಪ್ಪಿಸಿಕೊಂಡಿದ್ದ ಆರೋಪಿ ತಬ್ರೇಜ್ ಖಾನ್ನನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈನಲ್ಲಿ ನಡೆದಿದ್ದ ಗಲಭೆ ಮಾತ್ರವಲ್ಲದೇ ಕೊಲೆ ಆರೋಪ ಕೂಡ ಈತನ ಮೇಲಿದೆ.
2004ರಿಂದ ಈತ ತಲೆಮರೆಸಿಕೊಂಡಿದ್ದ. 18 ವರ್ಷಗಳ ಬಳಿಕ ಈಗ ಪೊಲೀಸರು ಬಂಧಿಸಿದ್ದಾರೆ. 2004ರಲ್ಲಿ ಜಾಮೀನು ಪಡೆದಿದ್ದ 47 ವರ್ಷದ ತಬ್ರೇಜ್ ಖಾನ್ ನಾಪತ್ತೆಯಾಗಿದ್ದ. 2014ರಲ್ಲಿ ಆತನ ವಿರುದ್ಧ ವಾರಂಟ್ ಹೊರಡಿಸಿತ್ತು ಎಂದು ದಿಂಡೋಶಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಜೀವನ್ ಖಾರತ್ ಹೇಳಿದ್ದಾರೆ.
1992ರ ಗಲಭೆಯ ಸಂದರ್ಭದಲ್ಲಿ ಕಾನೂನು ಬಾಹಿರ ಸಭೆ, ಗಲಾಟೆ, ಕೊಲೆ ಯತ್ನ ಮತ್ತು ಸರ್ಕಾರಿ ನೌಕರನ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ದಿಂಡೋಶಿ ಪೊಲೀಸರು ಚಾರ್ಜ್ ಶೀಟ್ ಮಾಡಿದ 9 ಜನರಲ್ಲಿ ತಬ್ರೇಜ್ ಖಾನ್ ಕೂಡ ಒಬ್ಬನಾಗಿದ್ದ. ಆ 9 ಆರೋಪಿಗಳ ಪೈಕಿ ಇಬ್ಬರನ್ನು ಖುಲಾಸೆಗೊಳಿಸಲಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.