ಸಾಮಾನ್ಯವಾಗಿ ಬದನೇಕಾಯಿ ಬಾತ್ ಅಥವಾ ವಾಂಗೀಬಾತ್ ಅಂದ್ರೆ ಎಣ್ಣೆಯಲ್ಲಿ ಫ್ರೈ ಮಾಡಿ ತಯಾರಿಸುವ ಗೊಜ್ಜು. ಆದರೆ ಈಗಿನ ಫಾಸ್ಟ್ ಲೈಫ್ನಲ್ಲಿ ಬಹುತೇಕರಿಗೆ ಗೊಜ್ಜನ್ನು ತಯಾರಿಸಿಕೊಳ್ಳುವಷ್ಟು ಪುರುಸೋತ್ತು ಇರುವುದಿಲ್ಲ. ಅಂತಹವರು ವಾಂಗೀಬಾತ್ ತಿನ್ನುವುದಕ್ಕೆ ಹೊಟೇಲ್ಗೆ ಹೋಗುವ ಅಗತ್ಯವಿಲ್ಲ. ಮನೆಯಲ್ಲಿ 20 ನಿಮಿಷಕ್ಕೆ ತಯಾರಿಸಬಹುದು. ಅದು ಹೇಗೆ ಅನ್ನೋದು ಇಲ್ಲಿದೆ ನೋಡಿ.
ಮೊದಲಿಗೆ ಸ್ಟೌ ಆನ್ ಮಾಡಿ ಒಂದು ಕುಕ್ಕರ್ ಇಟ್ಟು ಬಿಸಿ ಮಾಡಿ.
ಬಳಿಕ 2 ಟೀ ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.
ಎಣ್ಣೆ ಬಿಸಿಯಾದ ಬಳಿಕ ಚಕ್ಕೆ, ಏಲಕ್ಕಿ, ಲವಂಗ ಹಾಕಿ ಫ್ರೈ ಮಾಡಿಕೊಳ್ಳಿ.
3 ಈರುಳ್ಳಿಯನ್ನು ಉದ್ದಕ್ಕೆ ಹೆಚ್ಚಿ ಅದನ್ನು ಕುಕ್ಕರ್ಗೆ ಹಾಕಿ ಫ್ರೈ ಮಾಡಿಕೊಳ್ಳಿ.
ಬಳಿಕ 3 ಟೊಮ್ಯಾಟೋ ಹಣ್ಣನ್ನು ಸಣ್ಣ ಹೋಳುಗಳಾಗಿ ಹೆಚ್ಚಿ ಕುಕ್ಕರ್ಗೆ ಹಾಕಿಕೊಳ್ಳಿ.
ನಂತರ 4-5 ಗುಂಡು ಬದನೇ ಇಲ್ಲವೇ ಬಿಳಿ ಬದನೇಕಾಯಿ ಹೋಳುಗಳನ್ನು ಕುಕ್ಕರ್ಗೆ ಹಾಕಿ ಫ್ರೈ ಮಾಡಿಕೊಳ್ಳಿ. ಈಗ ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
ಬಳಿಕ 3-4 ಸ್ಪೂನ್ ನಷ್ಟು ವಾಂಗೀಬಾತ್ ಪುಡಿಯನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
ಆ ನಂತರ ಸ್ವಲ್ಪ ಹುಣಸೇ ರಸ ಬೆರೆಸಿ ಮಿಶ್ರಣ ಮಾಡಿಕೊಳ್ಳಿ.
ನಂತರ ಈ ಮಿಶ್ರಣಕ್ಕೆ ಒಂದು ಲೋಟ ಅಕ್ಕಿ ತೊಳೆದು ಹಾಕಿ 2 ಲೋಟ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
ಬಳಿಕ ಕುಕ್ಕರ್ ಮುಚ್ಚಳ ಮುಚ್ಚಿ 3 ಸೀಟಿ ಹೊಡೆಸಿದ್ರೆ ಬಿಸಿ ಬಿಸಿ ವಾಂಗೀಬಾತ್ ಸವಿಯೋದಕ್ಕೆ ಸಿದ್ಧ.
ಇದನ್ನು ಕಾಯಿ ಚಟ್ನಿ ಇಲ್ಲವೇ ಮೊಸರಿನ ರಾಯತದ ಜೊತೆಗೆ ಸೇವಿಸಬಹುದು.
ಬದನೇಕಾಯಿ ಬದಲಿಗೆ ಬೀನ್ಸ್, ಬಟಾಣಿ, ಆಲೂಗೆಡ್ಡೆಯನ್ನೂ ಸೇರಿಸಿಯೂ ಸಹ ಈ ರುಚಿಕರ ಬಾತ್ ಮಾಡಬಹುದು.