ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಎಬಿಪಿ, ಸಿ- ವೋಟರ್ ಸಮೀಕ್ಷೆ ಪ್ರಕಟವಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 115 -127, ಬಿಜೆಪಿ 68 -80, ಜೆಡಿಎಸ್ 23 -35, ಇತರರು 2 ಕ್ಷೇತ್ರಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ.
ಫೆಬ್ರವರಿ 26ರಿಂದ ಮಾರ್ಚ್ 26ರವರೆಗೆ ಎಬಿಪಿ, ಸಿ -ವೋಟರ್ ಸಮೀಕ್ಷೆ ನಡೆಸಲಾಗಿದೆ.
2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದ ಕೊರತೆ ಅನುಭವಿಸಿತು. ಬಿಜೆಪಿ ಕಳೆದ ಬಾರಿ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಬಿಜೆಪಿ ABP News-CVoter Karnataka Opinion Poll 2023 ರ ಪ್ರಕಾರ 68 ರಿಂದ 80 ಅಸೆಂಬ್ಲಿ ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ.
ಸಮೀಕ್ಷೆಯ ಪ್ರಕಾರ 2023 ರ ವಿಧಾನಸಭೆ ಚುನಾವಣೆಯಲ್ಲಿ 115 ರಿಂದ 127 ಸ್ಥಾನಗಳ ನಡುವೆ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತದೆ. 2018 ರ ಚುನಾವಣೆಯಲ್ಲಿ ಜೆಡಿಎಸ್ 37 ಸ್ಥಾನಗಳನ್ನು ಪಡೆದುಕೊಂಡಿತು. ಈ ಬಾರಿ 23 ರಿಂದ 35 ವಿಧಾನಸಭಾ ಸ್ಥಾನಗಳನ್ನು ಜೆಡಿಎಸ್ ಪಡೆಯುತ್ತದೆ ಎಂದು ಭವಿಷ್ಯ ನುಡಿದಿದೆ.
ಆದರೆ, ಸಮೀಕ್ಷೆಯೇ ಸತ್ಯವಲ್ಲ. ಇದು ಆಯಾ ಕಾಲ ಮತ್ತು ಸಂದರ್ಭ, ಸಂದರ್ಶಿಸಿದ ಜನರನ್ನು ಆಧರಿಸಿರುತ್ತದೆ. ಮತದಾರರ ಒಲವು ಯಾರ ಕಡೆಗಿದೆ, ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದನ್ನು ತಿಳಿಯಲು ಮೇ 13 ರ ಫಲಿತಾಂಶದ ದಿನದವರೆಗೆ ಕಾಯಬೇಕಿದೆ.