ಮಹಿಳೆಯರಿಗೆ ಹೆಚ್ಚಾಗಿ ಹೊಟ್ಟೆನೋವು ಕಾಣಿಸಿಕೊಳ್ಳೋದು ಮುಟ್ಟಿನ ಸಮಯದಲ್ಲಿ. ಆದ್ರೆ ಯಾವಾಗಲೂ ಅದು ಮುಟ್ಟಿನ ನೋವು ಇರಬಹುದು ಎಂಬ ತಪ್ಪು ಕಲ್ಪನೆ ಬೇಡ. ಆಕಸ್ಮಿಕವಾಗಿ ಆಗಾಗ್ಗೆ ಕಾಣಿಸಿಕೊಳ್ಳೋ ಹೊಟ್ಟೆ ನೋವಿಗೆ ಇನ್ನೂ ಹಲವು ಕಾರಣಗಳಿವೆ.
ಅನೇಕ ಬಾರಿ ಮಹಿಳೆಯರಿಗೆ ಓವರಿಯನ್ ಸಿಸ್ಟ್ ಸಮಸ್ಯೆ ಇದ್ದರೆ ಹೊಟ್ಟೆ ಉಬ್ಬರಿಸುತ್ತದೆ. ಕಾಲಕಾಲಕ್ಕೆ ಮುಟ್ಟಾಗದೇ ಇರಬಹುದು. ಕೆಳ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸಿಸ್ಟ್ ಸಿಡಿದಾಗ ತೀವ್ರ ನೋವು ಉಂಟಾಗುತ್ತದೆ. ಇವ್ಯಾವುದೇ ಲಕ್ಷಣಗಳು ನಿಮ್ಮಲ್ಲಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಓವರಿಯನ್ ಸಿಸ್ಟ್, ದ್ರವದಿಂದ ತುಂಬಿದ ಚೀಲ. ಅದು ಮಹಿಳೆಯರ ಒಂದು ಅಥವಾ ಎರಡೂ ಅಂಡಾಶಯಗಳಲ್ಲಿ ರೂಪುಗೊಳ್ಳುತ್ತದೆ. ಇದು ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಕಾಯಿಲೆ. ಇದಲ್ಲದೆ ಮೂತ್ರನಾಳದ ಸೋಂಕಿನಿಂದ ಕೂಡ ಮಹಿಳೆಯರಿಗೆ ಹೊಟ್ಟೆ ನೋವು ಬರುತ್ತದೆ. ಇದು ಕೂಡ ಸಾಮಾನ್ಯ ಸಮಸ್ಯೆ.
ಯುಟಿಐನಲ್ಲಿ ಮೂತ್ರಪಿಂಡ, ಗರ್ಭಾಶಯ, ಮೂತ್ರಕೋಶ, ಮೂತ್ರನಾಳದ ಸೋಂಕು ಸಂಭವಿಸುತ್ತದೆ. ಪುರುಷರಿಗಿಂತ ಮಹಿಳೆಯರು ಈ ಸಮಸ್ಯೆಗೆ ಹೆಚ್ಚು ಒಳಗಾಗುತ್ತಾರೆ. ಈ ಸಮಸ್ಯೆಯಿದ್ದರೆ ನಿಮ್ಮ ಹೊಟ್ಟೆಯ ಕೆಳಭಾಗದಲ್ಲಿ ನೋವು ಬರಬಹುದು.
ಗರ್ಭಪಾತದ ಸಮಯದಲ್ಲಿ ಕೂಡ ಮಹಿಳೆಯರು ತೀವ್ರ ಹೊಟ್ಟೆ ನೋವು ಅನುಭವಿಸುತ್ತಾರೆ. ಗರ್ಭಪಾತವಾದರೆ ಹೊಟ್ಟೆಯ ಕೆಳಭಾಗದಲ್ಲಿ ನೋವು, ಭಾರೀ ರಕ್ತಸ್ರಾವ, ಬೆನ್ನುನೋವು, ಜ್ವರ, ಸೆಳೆತ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.