ಮಡಿಕೇರಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಅಬ್ಬಿ ಫಾಲ್ಸ್ ಕೂಡ ಒಂದಾಗಿದೆ. ಹಚ್ಚ ಹಸಿರಿನ ಕಾಫಿ ಕಣಿವೆಗಳು, ಬೆಟ್ಟಗಳು, ಅಬ್ಬಿ ಜಲಪಾತದ ಸೌಂದರ್ಯವನ್ನು ಹೆಚ್ಚಿಸಿವೆ.
ಸುಮಾರು 40 ಅಡಿ ಎತ್ತರದಿಂದ ಧುಮ್ಮಿಕ್ಕುವ ನೀರು ನಿಮ್ಮಲ್ಲಿ ಹೊಸ ಉತ್ಸಾಹವನ್ನು ಮೂಡಿಸುತ್ತದೆ. ನೀರಿನ ಹನಿಗಳು ಮುತ್ತಿನ ಮಳೆ ಬಂದಂತೆ ಕಾಣುತ್ತವೆ.
ಮಡಿಕೇರಿಯಿಂದ ಸುಮಾರು 8 ಕಿಲೋ ಮೀಟರ್ ದೂರದಲ್ಲಿದೆ ಅಬ್ಬಿ ಫಾಲ್ಸ್. ಮಡಿಕೇರಿಯಿಂದ ಖಾಸಗಿ ವಾಹನಗಳಲ್ಲಿ ಜಲಪಾತದ ಸಮೀಪ ರಸ್ತೆವರೆಗೆ ತಲುಪಿ, ಅಲ್ಲಿಂದ ಸುಮಾರು 500 ಮೀಟರ್ ದೂರದವರೆಗೆ ಕಾಫಿ ತೋಟಗಳ ನಡುವೆ ನಡೆದುಕೊಂಡು ಹೋಗಬೇಕು.
ಇಲ್ಲಿನ ನಡಿಗೆ ಆಯಾಸವೆನಿಸುವುದೇ ಇಲ್ಲ. ಸ್ವಲ್ಪ ದೂರ ನಡೆದ ಕೂಡಲೇ ಕಣ್ಣಿಗೆ ಕಾಣುತ್ತದೆ ಅಬ್ಬಿ ಫಾಲ್ಸ್. ಮಳೆಗಾಲದಲ್ಲಿ ಜಲಪಾತದ ಸೌಂದರ್ಯ ಇಮ್ಮಡಿಸುತ್ತದೆ. ಸಮೀಪದ ಮಡಿಕೇರಿಯಲ್ಲಿ ಉಳಿಯಬಹುದು.
ಮಡಿಕೇರಿ ಅಬ್ಬಿಫಾಲ್ಸ್ ಸುತ್ತ ಮುತ್ತ ಅನೇಕ ಪ್ರವಾಸಿ ತಾಣಗಳಿವೆ ಮೊದಲೇ ಮಾಹಿತಿ ಪಡೆದುಕೊಂಡು ಹೋದಲ್ಲಿ ಅನುಕೂಲವಾಗುತ್ತದೆ.