
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಈಗಾಗಲೇ ನೂರಾರು ಕೋಟಿ ರೂಪಾಯಿಗಳನ್ನು ಗಳಿಸಿದ್ದು, ಈಗಲೂ ಕೂಡ ಜನ ಮುಗಿಬಿದ್ದು ‘ಕಾಂತಾರ’ ಚಿತ್ರವನ್ನು ನೋಡುತ್ತಿದ್ದಾರೆ.
‘ಕಾಂತಾರ’ ಕುರಿತು ಸೂಪರ್ ಸ್ಟಾರ್ ರಜನಿಕಾಂತ್, ನಟ ಪ್ರಭಾಸ್ ಸೇರಿದಂತೆ ಹಲವು ಖ್ಯಾತ ನಟ – ನಟಿಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವಿದೇಶದಲ್ಲೂ ಈ ಚಿತ್ರ ಸಖತ್ ಸದ್ದು ಮಾಡುತ್ತಿದೆ.
ಇದರ ಮಧ್ಯೆ ಬೆಂಗಳೂರಿಗೆ ಆಗಮಿಸಿರುವ ಖ್ಯಾತ ಕ್ರಿಕೆಟಿಗ ಎಬಿ ಡಿವಿಲಿಯರ್ಸ್, ರಿಷಬ್ ಶೆಟ್ಟಿ ಅವರನ್ನು ಭೇಟಿಯಾಗಿದ್ದು, ಇಬ್ಬರು ಸೇರಿ ಕಾಂತಾರ ಎಂದು ಹೇಳಿದ್ದಾರೆ. ಇದರ ವಿಡಿಯೋವನ್ನು ಹೊಂಬಾಳೆ ಫಿಲಂಸ್ ಹಾಗೂ ರಿಷಬ್ ಶೆಟ್ಟಿ ಅವರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ.
ಎಬಿ ಡಿವಿಲಿಯರ್ಸ್ ಈಗಾಗಲೇ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದು, ಈಗ ಬೆಂಗಳೂರಿಗೆ ಬಂದಿದ್ದೇಕೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಮೂಲಗಳ ಪ್ರಕಾರ ಐಪಿಎಲ್ ನ 10 ಆವೃತ್ತಿಗಳಲ್ಲಿ ಆರ್‌ಸಿಬಿ ಪರವಾಗಿ ಆಟವಾಡಿರುವ ಎಬಿ ಡಿವಿಲಿಯರ್ಸ್ ಈ ಬಾರಿ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.